ಬೆಳಗಾವಿ: ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ಅವರನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ(HD Kumaraswamy) ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಚಿವರಾಗಿ ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುವವರಿಗೆ ಮುಖ್ಯಮಂತ್ರಿ ಕರೆದು ಬುದ್ದಿ ಹೇಳಬೇಕು. ಇದು ಮುಗಿದು ಹೋಗಿರುವ ಸಂಗತಿ. ಮತ್ತೆ ಅದನ್ನು ಕೆಣಕುವುದು ಯಾಕೆ? ಬಹುಶಃ ಅವರಿಗೆ ಮಹಾರಾಷ್ಟ್ರದ ವ್ಯಾಮೋಹದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ನೆರೆ ರಾಜ್ಯದ ಮೇಲೆ ಅವರಿಗೆ ವ್ಯಾಮೋಹ ಜಾಸ್ತಿಯಿದೆ ಎಂದು ಅನಿಸುತ್ತದೆ ಎಂದು ಕಿಡಿಕಾರಿದರು. ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರೇ ಈ ರೀತಿ ಹೇಳಿಕೆ ನೀಡಿದರೆ ಅನಗತ್ಯ , ವಿವಾದಾತ್ಮಕ ವಿಷಯಗಳಿಗೆ ನೀವೆ ಪುಷ್ಠಿ ಕೊಟ್ಟಂತೆ ಅಲ್ಲವಾ? ಸಚಿವರ ಮೇಲೆ ಸಿಎಂಗೆ ನಿಯಂತ್ರಣವಿದ್ದರೇ ಕರೆದು ಬುದ್ದಿಹೇಳಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿ ಹೆಸರಲ್ಲಿ ರಚಿಸಿರುವ ಈ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರೇ ತಿಳಿಸಿದ್ದಾರೆ. ಈ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಅವರೇ ಹೇಳಿದ್ದಾರೆ ಎಂದರು. ಸರಕಾರ ಬಂದು 8 ತಿಂಗಳು ಕಳೆದರು ಬರ ಪರಿಹಾರ ವಿಚಾರದಲ್ಲಿ ಹೇಗೆ ನಡೆದುಕೊಂಡಿದ್ದಾರೆ ಎಂಬುದನ್ನು ಜನರು ನೋಡಿದ್ದಾರೆ. 2 ಸಾವಿರ ಹಣ ಕೊಡಲು 105 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಬರದಿಂದ 30 ಸಾವಿರ ಕೋಟಿ ನಷ್ಟ ಆಗಿದೆ ಅಂತ ಹೇಳಿ 105 ಕೋಟಿ ಬಿಡುಗಡೆ ಮಾಡಿದರೆ ಸಾಕಾ? ಇಷ್ಟು ಹಣದಿಂದ ಅವರು ರೈತರಿಗೆ ಯಾವ ರೀತಿಯಲ್ಲಿ ನೆರವಾಗಿದ್ದಾರೆ ಎಂದು ಕಟುವಾಗಿ ಟೀಕಿಸಿದರು.