ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ʻಕಾಟೇರ ಸಿನಿಮಾʼ (Kaatera Movie) ಭರ್ಜರಿ ಗಳಿಕೆ ಕಂಡಿದೆ. ಇದೀಗ ಬಿಡುಗಡೆಯಾದ ಆರೇ ದಿನಕ್ಕೆ ‘ಕಾಟೇರ’ ಸಿನಿಮಾ ಬರೋಬ್ಬರಿ 95.36 ಕೋಟಿ ರೂ. ಕಲೆಕ್ಷನ್ ಮಾಡಿದೆ. ಕಾಟೇರ’ ಸಿನಿಮಾ ಮೊದಲ ದಿನ 19.79 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು.
ಶನಿವಾರ (ಡಿ.30) 17.35 ಕೋಟಿ ರೂಪಾಯಿ ಬಾಚಿಕೊಂಡಿತು. ಭಾನುವಾರ (ಡಿ.31) ಬರೋಬ್ಬರಿ 20.94 ಕೋಟಿ ರೂ.ಸೋಮವಾರ (ಜ.1) 18.26 ಕೋಟಿ ರೂಪಾಯಿ ಮತ್ತು ಮಂಗಳವಾರ (ಜ.2) 9.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.ಬುಧವಾರ 9.78 ಕೋಟಿ ರೂಪಾಯಿ ಗಳಿಕೆ ಆಗಿದೆ. ಒಟ್ಟು ಕಲೆಕ್ಷನ್ 95.36 ಕೋಟಿ ರೂ. ಆಗಿದ್ದು, 100 ಕೋಟಿ ರೂ. ಕಲೆಕ್ಷನ್ ಮಾಡುವತ್ತ ದಾಪುಗಾಲು ಇಟ್ಟಿದೆ.
ಕಾಟೇರ ಸಿನಿಮಾ ಒಟಿಟಿ ಹಕ್ಕು ಜೀ5 ಖರೀದಿಸಿದೆ ಎಂದು ವರದಿಯಾಗಿದೆ.ಶಿವರಾಜ್ ಕುಮಾರ್ ಘೋಸ್ಟ್ ಸಿನಿಮಾ ಕೂಡ ಜಿ5 ನಲ್ಲೇ ಪ್ರಸಾರ ಕಂಡಿತ್ತು. ಇದೀಗ ಒಟಿಟಿಯಲ್ಲಿಯೂ ಸಖತ್ ಹವಾ ಸೃಷ್ಟಿಸಲಿದೆ ಎಂದು ಹೇಳಲಾಗುತ್ತಿದೆ.
ದರ್ಶನ್ ಅವರಿಗೆ ಈ ಹಿಂದೆ ತರುಣ್ ಸುಧೀರ್ ರಾಬರ್ಟ್ ಸಿನಿಮಾ ನಿರ್ದೇಶಿಸಿದ್ದರು. ಇದೀಗ ಅವರು ಮತ್ತೊಮ್ಮೆ ದರ್ಶನ್ ಆಯಕ್ಷನ್ ಕಟ್ ಹೇಳಿದ್ದಾರೆ. ದರ್ಶನ್ಗೆ ಜೋಡಿಯಾಗಿ ಹಿರಿಯ ನಟಿ ಮಾಲಾಶ್ರೀ ಮಗಳು ಆರಾಧನಾ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಶ್ರುತಿ ಕುಮಾರ್ ಗೋವಿಂದ್, ವೈಜನಾಥ್ ಬಿರಾದಾರ, ಜಗಪತಿ ಬಾಬು ಸೇರಿದಂತೆ ಇನ್ನೂ ಅನೇಕರು ಮಿಂಚಿದ್ದಾರೆ.
ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ ದರ್ಶನ್
“ಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ-ಆಶೀರ್ವಾದಕೆ ಕೊನೆಯಲ್ಲಿ! ಧನ್ಯೋಸ್ಮಿ ಸೆಲೆಬ್ರಿಟೀಸ್! ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ. ಈ ಪ್ರೀತಿಯ ಚಪ್ಪಾಳೆ ನಮ್ಮ ಕಾಟೇರ ಚಿತ್ರತಂಡದ ಮನತುಂಬಿದೆ. ಮಾತೇ ಬರುತ್ತಿಲ್ಲʼʼಎಂದು ಇನ್‌ಸ್ಟಾದಲ್ಲಿ ದರ್ಶನ್ ಬರೆದುಕೊಂಡಿದ್ದಾರೆ. ‘ಕಾಟೇರ’ ಮೂಲಕ ಗೆದ್ದಿರುವ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.ವಯಸ್ಸಾದ ವ್ಯಕ್ತಿಯ ಗೆಟಪ್ನಲ್ಲಿ ಅವರು ಎಂಟ್ರಿ ನೀಡುತ್ತಾರೆ. ಅದೇ ಫೋಟೊವನ್ನು ಹಂಚಿಕೊಂಡು ದರ್ಶನ್ ಅವರು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.ಮಾಸ್ ಅಂಶಗಳ ಜತೆಗೆ ಕಥೆಗೂ ಪ್ರಾಮುಖ್ಯತೆ ನೀಡಲಾಗಿದೆ ಎಂದು ಚಿತ್ರ ನೋಡಿದ ಹಲವರು ಅಭಿಪ್ರಾಯಪಟ್ಟಿದ್ದಾರೆ. ಸತ್ಯ ಘಟನೆ ಆಧಾರಿತ ಈ ಸಿನಿಮಾ ನೋಡಿ ಹಲವರು ಕಣ್ಣೀರು ಸುರಿಸಿದ್ದಾರೆ. ದರ್ಶನ್ ಅವರು ‘ಕಾಟೇರ’ ಸಿನಿಮಾದಲ್ಲಿ ಎರಡು ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಹೊಸ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಸಂದೇಶ ನೀಡುವ ಸಿನಿಮಾ ಕೂಡ ಇದು.