ನವದೆಹಲಿ: ಅಯೋಧ್ಯೆಯಲ್ಲಿನ ರಾಮ ಮಂದಿರ ಉದ್ಘಾಟನೆಗೆ ಶಿವಸೇನಾ ನಾಯಕ, ಮಾಜಿ ಸಿಎಂ ಉದ್ಧವ್ ಠಾಕ್ರೆಗೆ ಆಹ್ವಾನಿಸದ ವಿಚಾರವಾಗಿ ಬಿಜೆಪಿ ವಿರುದ್ಧ ಸಂಸದ ಸಂಜಯ್ ರಾವತ್ ಆಕ್ರೋಶ ಹೊರಹಾಕಿದ್ದಾರೆ.
ಗುರುವಾರ ಈ ಕುರಿತು ಮಾತನಾಡಿರುವ ಅವರು, ಬಿಜೆಪಿಯವರು ಭಗವಾನ್ ಶ್ರೀರಾಮನನ್ನು ಕಿಡ್ನಾಪ್ ಮಾಡಿದ್ದಾರೆ.
ಅಯೋಧ್ಯೆಯಲ್ಲಿ ನಡೆಯುತ್ತಿರುವ ಮಂದಿರದ ಲೋಕಾರ್ಪಣೆ ಬಿಜೆಪಿ ಪಕ್ಷದ ಕಾರ್ಯಕ್ರಮದಂತೆ ನಡೆಯುತ್ತಿದೆ. ಬಿಜೆಪಿಯವರ ಕಾರ್ಯಕ್ರಮಕ್ಕೆ ಯಾರು ಹೋಗುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಶಿವಸೇನಾ ಹಾಗೂ ಉತ್ತರ ಪ್ರದೇಶಕ್ಕೆ ಬಿಜೆಪಿಗಿಂತಲೂ ಮುಂಚಿತವಾಗಿ ಸಂಬಂಧ ಇದೆ. 1992 ರಲ್ಲಿ ಬಾಬರಿ ಮಸೀದಿ ಧ್ವಂಸದ ಕಾರ್ಯಾಚರಣೆಯನ್ನು ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆಯವರು ವಹಿಸಿಕೊಂಡಿದ್ದರು. ಬಿಜೆಪಿಯವರು ಅಲ್ಲಿ ಉದ್ಘಾಟನೆ ಕಾರ್ಯಕ್ರಮ ಮುಗಿಸಿದ ನಂತರ ನಾವು ಹೋಗಿ ರಾಮನ ದರ್ಶನ ಪಡೆಯುತ್ತೇವೆ ಎಂದು ರಾವತ್ ಹೇಳಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಸಂಜಯ್, ದೇವರ ಹೆಸರಿನಲ್ಲಿ ರಾಜಕೀಯ ಮಾಡುವುವರನ್ನು ಭಗವಾನ್ ಶ್ರೀರಾಮನು ಎಂದಿಗೂ ಸಹಿಸುವುದಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಲಾಭ ಪಡೆಯಲು ಬಿಜೆಪಿಯವರು ರಾಮನ ಮಂದಿರ ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.