ಬೆಳಗಾವಿ : ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯ್ಕರ ಆಯ್ಕೆ ವಿಚಾರ ಆರಂಭವಾದಾಗಿನಿಂದ ಈ ವರೆಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda patil yatnal)ಸ್ವಪಕ್ಷದವರನ್ನು ಟೀಕಿಸುವ ಒಂದು ಅವಕಾಶವನ್ನೂ ಬಿಡುತ್ತಿಲ್ಲ.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲೂ ಉತ್ತರ ಕರ್ನಾಟಕದ ವಿಚಾರ ಇಟ್ಟುಕೊಂಡು ಬಿಜೆಪಿ ನಾಯಕರಿಗೆ ಚಾಟಿ ಬೀಸಿದ್ದಾರೆ.
ಕುಮಾರಸ್ವಾಮಿ ಸರ್ಕಾರ ಇದ್ದಾಗ 105 ಕೋಟಿ ರೂಪಾಯಿ ನೀಡಿದ್ದರು ಆದರೆ ಆ ಅನುದಾನವನ್ನು ಬಿಜೆಪಿ ಅಧಿಕಾರಕ್ಕೆ ಬಂದಾಗ ರದ್ದು ಮಾಡಿತ್ತು . ಪಿಎಸಿಗೆ ಸಿ ಸಿ ಪಾಟೀಲ್ ಅಧ್ಯಕ್ಷರನ್ನಾಗಿ ಮಾಡಿ ಪಂಚಮಸಾಲಿ ಸಮುದಾಯವನ್ನು ಸಮಧಾನಪಡಿಸಲು ಹೊರಟಿದೆ ಎಂದು ಹೇಳಿದರು. ಕೆಲವರು ಹೇಳ್ತಾರೆ, ಯತ್ನಾಳ್‌ರೇ ನಿಮ್ಮ ಬಾಯಿ ಸರಿ ಇದ್ದಿದ್ದರೆ ನೀವು ಸಿಎಂ ಆಗ್ತಿದ್ರೀ ಅಂತ, ಆದರೆ ನಾನು ಯಾವಾಗಲೂ ನೇರವಾಗಿ ಹೇಳ್ತೇನೆ , ಯಾರಿಗೂ ಹೆದರುವುದಿಲ್ಲ ಎಂದು ಕಲಾಪದ ವೇಳೆ ಹೇಳಿದರು.
ಬೊಮ್ಮಾಯಿ, ಬೈರತಿ ಬಸವರಾಜ್ ಅನುದಾನ ನೀಡಿ ನೆರವಾದರು, ನಾನು ಟಾರ್ಗೆಟ್ ಮಾಡಿದ್ರೆ ಮಾಜಿ ಆಗುವವರೆಗೂ ಬಿಡುವುದಿಲ್ಲ ಎಂದು ಯತ್ನಾಳ್ ಹೇಳಿದ್ದರು. ಈ ವೇಳೆ ಮಾತನಾಡಿದ ಕಾಗವಾಡ ಶಾಸಕ ರಾಜು ಕಾಗೆ , ನಿಮ್ಮ ಸಹಾಯಕ್ಕೆ ಬರುತ್ತೇನೆ ಎಂದು ಎದ್ದು ನಿಂತರು ತಕ್ಷಣ ಪ್ರತಿಕ್ರಯಿಸಿದ ಯತ್ನಾಳ್, ನನ್ನ ಸಹಾಯಕ್ಕೆ ಯಾರೂ ಬೇಡ ನಾನು ಒಂಟಿ ಸಲಗ ಎಂದು ಹೇಳಿದರು. ಮಾತುಕತೆ ಮಧ್ಯೆ ಎದ್ದು ನಿಂತ ಶಾಸಕ ಅಬ್ಬಯ್ಯ ಪ್ರಸಾದ್ , ನಿಮ್ಮ ಜೊತೆ ಬಿಜೆಪಿಯವರು ಯಾರೂ ಇಲ್ವಾ ಎಂದು ಕೆಣಕಿದರು, ಇಲ್ಲಾ ಅಂತಾನೇ ಅಂದುಕೊಳ್ಳಿ ಎಂದು ನೇರವಾಗಿಯೇ ಯತ್ನಾಳ್ ಹೇಳಿದ್ದು ಬಿಜೆಪಿ ನಾಯಕರಿಗೆ ಮುಜುಗರ ಉಂಟುಮಾಡಿದೆ.