ಬೆಳಗಾವಿ/ಬೆಂಗಳೂರು: ರಾಜ್ಯ ಸರಕಾರ ತೆಂಗು ಬೆಳೆಗಾರರಿಗೆ ಸಹಾಯ ಮಾಡಲು, ಕೇಂದ್ರದ ಬೆಂಬಲ ಬೆಲೆ ಯೋಜನೆಯಡಿ ನೀಡುವ ದರದೊಂದಿಗೆ ಕೊಬ್ಬರಿ ಖರೀದಿಗೆ ಈಗಾಗಲೇ 1,225 ರೂ.ಗಳನ್ನು ಪ್ರೊತ್ಸಾಹಧನ ನೀಡುತ್ತಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದರು.
ಶೂನ್ಯ ವೇಳೆಯಲ್ಲಿ ಶಾಸಕ ಶಿವಲಿಂಗೇಗೌಡ, ಎಚ್.ಡಿ.ರೇವಣ್ಣ ಸೇರಿದಂತೆ ವಿವಿಧ ಶಾಸಕರು ಕೊಬ್ಬರಿ ಖರೀದಿ ಬೆಲೆ ಬಹಳಷ್ಟು ಕಡಿಮೆ ಆಗಿರುವುದರಿಂದ ಸರಕಾರಗಳು ರೈತರ ನೆರವಿಗೆ ಬರಬೇಕೆಂದು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ನಫೇಡ್ ಸಂಸ್ಥೆ ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿ ಕಾರ್ಯವನ್ನು ಸ್ಥಗಿತಗೊಳಿಸಿರುವುದರಿಂದ ರೈತರಿಗೆ ತೊಂದರೆ ಆಗಿದೆ. ಮರು ಆರಂಭಿಸಲು ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ. ರಾಜ್ಯ ಸರಕಾರ ಕೊಬ್ಬರಿ ಖರೀದಿಗೆ ನೀಡಿರುವ ಈಗೀರುವ ಪ್ರೋತ್ಸಾಹಧನ ರೂ.1225 ಗಳೊಂದಿಗೆ ರೂ.225 ಸೇರಿಸಿ ಒಟ್ಟು 1500 ರೂ.ಗಳನ್ನು ನೀಡುತ್ತದೆ. ಕೇಂದ್ರ ಆದಷ್ಟು ಬೇಗ ಖರೀದಿ ಪ್ರಾರಂಭಿಸಿದರೆ ರೈತರಿಗೆ ಒಳಿತಾಗುತ್ತದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಹೆಚ್.ಡಿ.ರೇವಣ್ಣ, ಕೈ ಶಾಸಕ ಷಡಕ್ಷರಿ ಗೆಲ್ಲಬೇಕಾದರೆ ಡಿಕೆ ಶಿವಕುಮಾರ್ ಚುನಾವಣೆ ವೇಳೆ ನಮ್ಮ ಸರ್ಕಾರ ಬಂದ 24 ತಾಸಿನಲ್ಲಿ ನಾನು ಕೊಬ್ಬರಿಗೆ 15,000 ರೂ. ಕೊಡಿಸುವ ತರ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಅದರಿಂದ ಷಡಕ್ಷರಿ ಗೆದ್ದಿದ್ದಾರೆ. ಕೊಟ್ಟರೆ ಕೊಡಿ ಇಲ್ಲಾಂದ್ರೆ ನಾನು ಚುನಾವಣೆಗೋಸ್ಕರ ಮಾತ್ರ ಹೇಳಿದ್ದೇನೆ ಅಷ್ಟೇ, ನನಗೆ ಈಗ ಆಗಲ್ಲ ಎಂದು ಹೇಳಲಿ ಎಂದು ಸವಾಲು ಹಾಕಿದರು.