ಬೀದರ್ : ಗಡಿ ಜಿಲ್ಲೆ ಬೀದರ್‌ನಲ್ಲಿ ನಕಲಿ ವೈದ್ಯರ ಹಾವಳಿ ಹಿನ್ನೆಲೆ ಇಂದು ಕಮಲನಗರ ತಾಲೂಕಿನ ಒಟ್ಟು 6 ನಕಲಿ ಕ್ಲಿನಿಕ್‌ಗಳ ಮೇಲೆ ದಿಢೀರ್ ದಾಳಿ ಮಾಡಿದ ವೈದ್ಯಾಧಿಕಾರಿಗಳು ನಕಲಿ ವೈದ್ಯರಿಗೆ ಶಾಕ್ ನೀಡಿದ್ದಾರೆ.
ನಕಲಿ ಕ್ಲಿನಿಕ್‌ಗಳಾದ ಡಾ. ಬಿಹಾರಿ ಕ್ಲಿನಿಕ್, ಲಕ್ಷ್ಮೀ ಕ್ಲಿನಿಕ್ ಸೇರಿದಂತೆ ಒಟ್ಟು 6 ಕ್ಲಿನಿಕ್‌ಗಳ ಮೇಲೆ ತಾಲೂಕಿನ ಆರೋಗ್ಯಾಧಿಕಾರಿ ಡಾ ಗಾಯತ್ರಿ ವಿಜಯಕುಮಾರ್ ಮತ್ತು ತಂಡದಿಂದ ದಾಳಿ ಮಾಡಲಾಗಿದೆ. ದಾಳಿ ಮಾಡಿ ನಕಲಿ ವೈದ್ಯರ ಮೇಲೆ ಪ್ರಕರಣ ದಾಖಲಿಸಿದ ಜಿಲ್ಲಾ ಆರೋಗ್ಯಾಧಿಕಾರಿಗಳು ಲಕ್ಷಾಂತರ ಮೌಲ್ಯದ ಔಷಧಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಜೊತೆಗೆ ಯಾವುದೇ ಪರವಾನಿಗೆ ಇಲ್ಲದ ಕಮಲನಗರ ಗ್ರಾಮೀಣ ಭಾಗದ 2 ಕ್ಲಿನಿಕ್ ಹಾಗೂ ಪಟ್ಟಣದಲ್ಲಿ 4 ನಕಲಿ ಕ್ಲಿನಿಕ್‌ಗಳಿಗೆ ಬೀಗ ಹಾಕಿದ್ದಾರೆ.
”ಕಮಲನಗರ ತಾಲೂಕಿನಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳ ನೇತೃತ್ವದಲ್ಲಿ ನಕಲಿ ವೈದ್ಯರ ಕ್ಲಿನಿಕ್ ಮೇಲೆ ರೇಡ್ ನಡೆಯುತ್ತಿದೆ. ಆಯುರ್ವೇದಿಕ್, ಯುನಾನಿ, ಆಲೋಪಥಿ, ಹೋಮಿಯೋಪಥಿಗೆ ಸಂಬಂಧಿಸಿದಂತೆ ಡಿಗ್ರಿ ಪಡೆದವರು ಮಾತ್ರ ಕ್ಲಿನಿಕ್ ನಡೆಸಬೇಕು ಎಂಬ ನಿಯಮವಿದೆ. ಆದರೂ ಹತ್ತನೆ ತರಗತಿ, ದ್ವಿತೀಯ ಪಿಯುಸಿ ಪಾಸಾಗದವರು ಹಾಗೂ ಹೊರರಾಜ್ಯದಿಂದ ಇಲ್ಲಿಗೆ ಬಂದು ಇಲ್ಲಿನ ಜನರ ಆರೋಗ್ಯದ ಜೊತೆ ಆಟ ಆಡುತ್ತಿದ್ದಾರೆ. ಹಾಗಾಗಿ ನಕಲಿ ಕ್ಲಿನಿಕ್ಗೆ ಭೇಟಿ ನೀಡಿ ಅವರ ಸರ್ಟಿಫಿಕೆಟ್ಗಳನ್ನ ಪರಿಶೀಲಿಸಿದ್ದೇವೆ. ಹಾಗೂ ಅವರು ಜನರಿಗೆ ಕೊಡುತ್ತಿರುವ ಔಷಧಿ ಸರಿ ಇದೆಯೇ ಎಂಬುದನ್ನು ಪರಿಶೀಲಿಸಿದ್ದೇವೆ. ಒಂದು ವೇಳೆ ಜನರ ಆರೋಗ್ಯಕ್ಕೆ ಹಾನಿಯಾಗುವಂತಹ ಔಷಧಿಗಳನ್ನ ನೀಡುತ್ತಿದ್ದರೆ, ಹಾಗೂ ಅದಕ್ಕೆ ಸಂಬಂಧಿಸಿದಂತೆ ಸರ್ಟಿಫಿಕೆಟ್ ದೊರೆಯದಿದ್ದಲ್ಲಿ, ಅಂತಹ ನಕಲಿ ಆಸ್ಪತ್ರೆಯನ್ನು ಸೀಜ್ ಮಾಡುವಂತಹ ಕೆಲಸ ನಡೆಯುತ್ತಿದೆ.