ಮೈಸೂರು: ಶಾಸಕ ಉಮೇಶ್ ಕತ್ತಿ ಏನೇನೋ ಆಡ್ತಾನೆ. ಆದರೆ ಪಕ್ಷ ಬಿಡುವುದಿಲ್ಲ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿಯ ಕೆಲ ಶಾಸಕರಿಂದ ರಹಸ್ಯ ಸಭೆ ವಿಚಾರ ಸಂಬಂಧ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಫಿ, ತಿಂಡಿಗೆ ಸೇರುವುದೆಲ್ಲ ತಪ್ಪಲ್ಲ ಎಂದರು.

ಕೊರೊನಾ ಲಾಕ್‍ಡೌನ್ ಕಾರಣದಿಂದ ಯಾರೂ ಪರಸ್ಪರ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಬಹಳ ದಿನಗಳ ನಂತರ ಎಲ್ಲರೂ ಕೂಡಿದ್ದಾರೆ. ಒಂದು ಕಡೆ ಕುಳಿತು ಊಟ ಮಾಡಿದ್ದಾರೆ. ಅದನ್ನೇ ಮಾಧ್ಯಮಗಳು ತಪ್ಪಾಗಿ ಅರ್ಥೈಸುತ್ತಿವೆ. ಸಭೆ ಸೇರಿದ ಮಾತ್ರಕ್ಕೆ ಏನೇನೋ ಆಗಿ ಬಿಡುವುದಿಲ್ಲ ಎಂದು ಗುಡುಗಿದರು. ಉಮೇಶ್ ಕತ್ತಿ ನನ್ನ ಸ್ನೇಹಿತ. ಆತ ಏನೇನೋ ಆಡ್ತಾನೆ, ಆದ್ರೆ ಪಕ್ಷ ಬಿಡುವುದಿಲ್ಲ ಎಂದು ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು.

ಗುರುವಾರ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಮಾತನಾಡಿ, ಲೋಕಸಭಾ ಚುನಾವಣೆ ವೇಳೆ ಟಿಕೆಟ್ ತಪ್ಪಿದಾಗ ನಮ್ಮನ್ನು ಭೇಟಿಯಾಗಿದ್ದ ಯಡಿಯೂರಪ್ಪನವರು ರಾಜ್ಯಸಭೆಯ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಅದಕ್ಕಿಂತ 2014ರ ಚುನಾವಣೆಯಲ್ಲಿ ಮೂರು ಸಾವಿರ ಮತಗಳ ಅಂತರದಿಂದ ಸೋತಿದ್ದೆ. ಆದರೂ 2019ರ ಚುನಾವಣೆಯಲ್ಲಿ ನನಗೆ ಯಾಕೆ ಟಿಕೆಟ್ ನೀಡಲಿಲ್ಲ ಕಾರಣ ಇದುವರೆಗೂ ಗೊತ್ತಿಲ್ಲ. ನಾವೆಲ್ಲ 15 ಶಾಸಕರು ಒಂದೆಡೆ ಸೇರಿದ ವಿಷಯ ಸಿಎಂ ಯಡಿಯೂರಪ್ಪರಿಗೆ ಗೊತ್ತು ಎಂದು ಹೇಳುವ ಮೂಲಕ ಸಭೆ ನಡೆದಿರೋದು ಸತ್ಯ ಎಂಬುದನ್ನು ಒಪ್ಪಿಕೊಂಡಿದ್ದರು.

ಸೋದರ ಉಮೇಶ್ ಕತ್ತಿ ಬಿಜೆಪಿಯಲ್ಲಿರುವ ಹಿರಿಯ ನಾಯಕರಲ್ಲಿ ಒಬ್ಬರು. ಹಾಗಾಗಿ ಅವರಿಗೆ ಸಚಿವ ಸ್ಥಾನ ಸಿಗಲೇಬೇಕು. ನನಗೆ ರಾಜ್ಯಸಭೆಯ ಟಿಕೆಟ್ ಸಿಗಲೇಬೇಕು. ಯಡಿಯೂರಪ್ಪನವರು ನಮ್ಮ ನಾಯಕರು. ನಾವು ಚಿಕ್ಕವರಿದಾಗಿನಿಂದಲೂ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಬಂದಿದ್ದೇವೆ. ಉಮೇಶ್ ಕತ್ತಿ ಸಚಿವ ಸ್ಥಾನ ಮತ್ತು ನಾನು ರಾಜ್ಯಸಭಾ ಟಿಕೆಟ್ ಕೇಳುವುದು ನಮ್ಮ ಹಕ್ಕು. ಆದರೆ ನಾವು ಮುಖ್ಯಮಂತ್ರಿಗಳನ್ನ ಬ್ಲ್ಯಾಕ್ ಮೇಲ್ ಮಾಡಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳಿ ಎಂದು ಹೇಳಿದ್ದೇವೆ ಎಂದು ತಿಳಿಸಿದ್ದರು.
Laxmi News 24×7