ಬೆಂಗಳೂರು: ರಾಜಧಾನಿ ಹಾಗೂ ಗ್ರಾಮಾಂತರ ಜಿಲ್ಲೆ ಸೇರಿ 60 ಶಾಲೆಗಳಿಗೆ ಹುಸಿ ಬಾಂಬ್ ಕರೆ ಸಂಬಂಧ ಆಯಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಹುಸಿ ಬಾಂಬ್ ಇಮೇಲ್ ಸಂದೇಶ ಎಲ್ಲಿಂದ ಬಂದಿದೆ? ಎಂಬುದರ ಬಗ್ಗೆ ಪತ್ತೆ ಹಚ್ಚುವ ಕಾಯಕದಲ್ಲಿ ಪೊಲೀಸರು ತೊಡಗಿಸಿಕೊಂಡಿದ್ದಾರೆ.
ವಿಶೇಷ ತಂಡ ರಚಿಸಿ ಇಮೇಲ್ನ ಐಪಿ ಅಡ್ರೆಸ್ ಟ್ರೇಸ್ ಮಾಡುತ್ತಿದ್ದಾರೆ. ಈಗಾಗಲೇ ಸರ್ವರ್ ಪ್ರೊವೈಡರ್ಗಳಿಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ. ತನಿಖೆ ಕೈಗೊಂಡಿರುವ ಸ್ಥಳೀಯ ಪೊಲೀಸರು ಇಮೇಲ್ ರಿಜಿಸ್ಟ್ರೇಷನ್, ಲಾಗಿನ್ ಐಪಿ ಮಾಹಿತಿ, ಇಮೇಲ್ ಡ್ರಾಫ್ಟ್ ಮಾಹಿತಿ, ಸೆಂಡ್ ಫೋಲ್ಡರ್ ಮತ್ತು ಇಮೇಲ್ ಚಾಟ್ ಹಿಸ್ಟರಿ ಸೇರಿದಂತೆ ಇನ್ನಿತರ ಮಾಹಿತಿ ನೀಡುವಂತೆ ಗೂಗಲ್‌ಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಈ ಹಿಂದೆ ಕೂಡ ಹಲವು ಬಾರಿ ಇದೇ ರೀತಿ ಬಾಂಬ್ ಬೆದರಿಕೆ ಇ-ಮೇಲ್ ಕೇಸ್ಗಳು ದಾಖಲಾಗಿವೆ. 2022ರ ಏಪ್ರಿಲ್‌ನಲ್ಲಿ ಏಳು ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ಬಂದಿದ್ದವು. ಹೆಣ್ಣೂರು, ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ಏಳು ಖಾಸಗಿ ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದರು. ತನಿಖೆ ವೇಳೆ ಹುಸಿ ಬಾಂಬ್ ಕರೆ ಎಂದು ಬೆಳಕಿಗೆ ಬಂದಿತ್ತು. ಅಲ್ಲದೆ 2020ರ ಜುಲೈನಲ್ಲಿ ಡಿಕೆಶಿ ಒಡೆತನದ ಆರ್ಆರ್ ನಗರದ ಠಾಣಾ ವ್ಯಾಪ್ತಿಯ ಶಾಲೆಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಈ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಅದೇ ಶಾಲೆಯ ವಿದ್ಯಾರ್ಥಿಯೊಬ್ಬನಿಂದ ಇಮೇಲ್ ಬಂದಿರುವುದನ್ನು ಪತ್ತೆ ಹಚ್ಚಲಾಗಿತ್ತು. ಆಗ ಪೊಲೀಸರು ಈ ಪ್ರಕರಣವನ್ನ ಬಗೆಹರಿಸಿದ್ದರು.