ಕಡಬ (ದಕ್ಷಿಣ ಕನ್ನಡ) : ಅಡಿಕೆಯನ್ನು ಕದ್ದು ವಾಹನಕ್ಕೆ ತುಂಬಿಸುತ್ತಿರುವುದನ್ನು ಕಂಡು ಅದನ್ನು ತಡೆದ ವೇಳೆ ಅಪರಿಚಿತ ವ್ಯಕ್ತಿಗಳು ವ್ಯಕ್ತಿಯೋರ್ವರಿಗೆ ತಲವಾರಿನಿಂದ ಹಲ್ಲೆ ನಡೆಸಿ, ಕದ್ದ ಅಡಿಕೆಯೊಂದಿಗೆ ಪರಾರಿಯಾಗಿದ್ದಾರೆ. ಈ ವೇಳೆ ಓರ್ವ ಕಳ್ಳನನ್ನು ಅಡಿಕೆ ಚೀಲಗಳ ಮಾಲೀಕ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಗ್ರಾಮದ ಪಣೆಮಜಲು ಎಡಪತ್ಯ ಫಾರ್ಮ್ಸ್ ಎಂಬಲ್ಲಿ ನಡೆದಿದೆ.
ಈ ಬಗ್ಗೆ ಕಡಬ ತಾಲೂಕಿನ ಸವಣೂರು ಗ್ರಾಮದ ಕಡಬ ನಿವಾಸಿ ಎ. ಆರ್. ಚಂದ್ರ ಎಂಬುವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.
ದೂರಿನಲ್ಲೇನಿದೆ..? : ದಿನಾಂಕ 25.11.2023 ರಂದು ಬೆಳಗಿನ ಜಾವ 03.30 ಸುಮಾರಿಗೆ ಚಂದ್ರ ಎಂಬುವರ ಮಗನಾದ ನಿಷ್ಕಲ್ ರಾಮ ಎಂಬವರು, ಮೈಸೂರಿನಿಂದ ಮೋಟಾರ್ ಸೈಕಲಿನಲ್ಲಿ ತಮ್ಮ ಸವಣೂರು ಗ್ರಾಮದ ಪಣೆಮಜಲು ಎಡಪತ್ಯ ಫಾರ್ಮ್ಸ್ ಎಂಬಲ್ಲಿರುವ ಮನೆಗೆ ಬಂದಾಗ, ತನ್ನ ಮನೆಯ ಅಂಗಳದಲ್ಲಿ ಒಂದು ಕಾರು ಮತ್ತು ಒಂದು ಸ್ಕೂಟರ್‌ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ತಾವು ತಂದಿದ್ದ ವಾಹನಗಳಲ್ಲಿ ತನ್ನ ಮನೆಯ ಅಡಿಕೆಯನ್ನು ಕದ್ದು ತುಂಬಿಸುತ್ತಿರುವುದು ಕಂಡು ಬಂದಿದೆ.
ಈ ಬಗ್ಗೆ ನಿಷ್ಕಲ್ ರಾಮ ಅವರು ಪ್ರಶ್ನಿಸಿದ್ದು, ಈ ವೇಳೆ ಈ ಅಪರಿಚಿತ ವ್ಯಕ್ತಿಗಳು ನಿಷ್ಕಲ್ ರಾಮ ಅವರಿಗೆ ತಲವಾರಿನಿಂದ ಹಲ್ಲೆ ನಡೆಸಿ, ಅವರ ಪೈಕಿ ಓರ್ವ ಆರೋಪಿಯು ಅದಾಗಲೇ ಎರಡು ಗೋಣಿ ಚೀಲದಲ್ಲಿ ಸುಲಿದು ತುಂಬಿಸಿಟ್ಟಿದ್ದ ಅಂದಾಜು ರೂ. 24000/- ರೂ. ಮೌಲ್ಯದ ಅಡಿಕೆಯನ್ನು ಸ್ಕೂಟರಲ್ಲಿ ಇಟ್ಟುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನೊಬ್ಬ ಆರೋಪಿಯು ಕಾರಿನಲ್ಲಿ ತುಂಬಿಸಿಟ್ಟಿದ್ದ ಅಂದಾಜು ರೂ. 75000/- ಮೌಲ್ಯದ 8 ಪ್ಲಾಸ್ಟಿಕ್ ಚೀಲ ಸುಲಿಯದ ಅಡಿಕೆಯೊಂದಿಗೆ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದ. ಈ ವೇಳೆ ಗಲಾಟೆ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಆತನನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ, ಆತನು ತನ್ನ ಹೆಸರು ಬಶೀರ್ ಎಂಬುದಾಗಿ ಹಾಗೂ ತನ್ನೊಂದಿಗಿದ್ದು ಪರಾರಿಯಾದ ವ್ಯಕ್ತಿಯ ಹೆಸರು ಹಕೀಂ ಎಂಬುದಾಗಿ ತಿಳಿಸಿರುತ್ತಾನೆ. ಈ ಹಿನ್ನೆಲೆ ಆರೋಪಿಯನ್ನು ಬೆಳ್ಳಾರೆ ಠಾಣೆಗೆ ಕರೆತಂದು ಘಟಣೆಯ ಬಗ್ಗೆ ದೂರು ನೀಡಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ. ಕ್ರ 78/2023 ಕಲಂ 392, 397 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.