Breaking News

ಸುವರ್ಣ ವಿಧಾನಸೌಧದ ಸುತ್ತ ಹುಲುಸಾಗಿ ಬೆಳೆದ ಮೇವು ಕಟಾವಿಗೆ ಅನುಮತಿ ನೀಡುವಂತೆ ರೈತರ ಮನವಿ

Spread the love

ಬೆಳಗಾವಿ : ಈ ಬಾರಿ ರಾಜ್ಯದಲ್ಲಿಕಂಡು ಕೇಳರಿಯದ ಬರಗಾಲದಿಂದ ಅಕ್ಷರಶಃ ರೈತರು ಕಂಗಾಲಾಗಿದ್ದಾರೆ. ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಮುಂಗಾರು ಬೆಳೆ ಹಾನಿ ಅನುಭವಿಸಿದ್ದ ರೈತರು, ಇದೀಗ ಹಿಂಗಾರು ಬೆಳೆಗಳ ಹಾನಿ ಭೀತಿ ಎದುರಿಸುತ್ತಿದ್ದಾರೆ. ಅಲ್ಲದೇ ಜಾನುವಾರುಗಳ ಮೇವಿಗೂ ತಾತ್ವಾರ ಸ್ಥಿತಿ ನಿರ್ಮಾಣ ಆಗುವ ಸಾಧ್ಯತೆಯಿದೆ.

ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತವು, ಡಿಸೆಂಬರ್​ 4ರಿಂದ ಚಳಿಗಾಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆ ಸ್ವಚ್ಛತೆ ಹೆಸರಿನಲ್ಲಿ ಸುವರ್ಣ ವಿಧಾನಸೌಧ ಸುತ್ತಲೂ 10 ಏಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಹುಲ್ಲನ್ನು ಜೆಸಿಬಿಗಳ ಮೂಲಕ ತೆಗೆಯಲಾಗುತ್ತಿದೆ. ಸದ್ಯ ಇದು ಹಲಗಾ, ಬಸ್ತವಾಡ, ಅಲಾರವಾಡ, ಕೊಂಡಸಕೊಪ್ಪ ಸೇರಿ ಸುತ್ತಲಿನ ಗ್ರಾಮಗಳ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹಸಿರು ಹುಲ್ಲು ಇದ್ದಾಗಲೇ ಕಟಾವು ಮಾಡಿಕೊಳ್ಳಲು ಅನುಮತಿ ನೀಡುವಂತೆ ನಾವು ಮನವಿ ಮಾಡಿಕೊಂಡಿದ್ದೆವು. ಆದರೆ, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು, ಜಿಲ್ಲಾಡಳಿತ ಸೊಪ್ಪು ಹಾಕಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ರೈತ ಮುಖಂಡ ಪ್ರಕಾಶ ನಾಯಿಕ ಈಟಿವಿ ಭಾರತ ಜೊತೆಗೆ ಮಾತನಾಡಿ, ‘ಮೂಕ ಪ್ರಾಣಿಗಳಿಗೆ ಆಹಾರ ಆಗಬೇಕಿದ್ದ ಮೇವನ್ನು ಹಾಳು ಮಾಡುತ್ತಿರುವುದು ನೋಡಿ ದುಃಖವಾಗುತ್ತಿದೆ. ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಮೇವನ್ನು ರೈತರ ಜಾನುವಾರುಗಳಿಗೆ ನೀಡಬೇಕು’ ಎಂದು ಆಗ್ರಹಿಸಿದರು.

ಹಲಗಾ ರೈತ ಸುರೇಶ ಮರ್ಯಾಕಾಚೆ ಮಾತನಾಡಿ, ‘ಸುರ್ವಣಸೌಧಕ್ಕೆ ನಮ್ಮ ಭೂಮಿ ಕೊಟ್ಟಿದ್ದೇವೆ. ಈಗ ಬರದಿಂದ ಮೇವು ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಪೌಷ್ಠಿಕ ಮೇವನ್ನು ಹಾಳು ಮಾಡುತ್ತಿದ್ದಾರೆ. ನಮಗೆ ಕೊಟ್ಟಿದ್ದರೆ ನಮ್ಮ ದನಗಳಿಗೆ ಒಯ್ಯುತ್ತಿದ್ದೇವೆ’ ಎಂದು ಅಳಲು ತೋಡಿಕೊಂಡರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ, ‘ಅಧಿವೇಶನ ಹಿನ್ನೆಲೆ ಸ್ವಚ್ಛತೆ ಕೈಗೊಳ್ಳಲಾಗಿದ್ದು, ಹುಲ್ಲು ಯಾರಿಗಾದರೂ ಬೇಕಾಗಿದ್ದರೆ ಬಂದು ತೆಗೆದುಕೊಂಡು ಹೋಗಬಹುದು. ಇದಕ್ಕೆ ಯಾವುದೇ ಅಭ್ಯಂತರ ಇಲ್ಲ’ ಎಂದರು.

ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ರಾಜೀವ ಕೂಲೇರ ಅವರನ್ನು ಸಂಪರ್ಕಿಸಿದಾಗ, ‘ಆ ಹುಲ್ಲು ಜಾನುವಾರುಗಳು ತಿನ್ನಲು ಯೋಗ್ಯವಿದೆ. ಇನ್ನು ಡಿಸೆಂಬರ್ ವರೆಗೆ ಜಿಲ್ಲೆಯಲ್ಲಿ ಮೇವಿನ ಕೊರತೆ ಇಲ್ಲ. ಮುಂಗಾರು ಹಂಗಾಮಿನಲ್ಲಿ 16ಲಕ್ಷ ಮೆಟ್ರಿಕ್ ಟನ್ ಮೇವಿನ ಲಭ್ಯತೆಯಿದೆ. ಹಿಂಗಾರಿನಲ್ಲಿ ಬರುವ ಹಸಿ ಕಬ್ಬಿನ ಸೋಗೆ ಮತ್ತು ಒಣ ಸೋಗೆಯನ್ನು ಮೇವಿಗೆ ಬಳಸಲು ಮುಂದಾಗಿದ್ದೇವೆ. ದಯವಿಟ್ಟು ಯಾವ ರೈತರೂ ಕಬ್ಬಿನ ಸೋಗೆಯನ್ನು ಸುಟ್ಟು ನಾಶಪಡಿಸಬಾರದು’ ಎಂದು ಮನವಿ ಮಾಡಿಕೊಂಡರು.


Spread the love

About Laxminews 24x7

Check Also

ಗರ್ಭಿಣಿಯಾದಳೆಂದು ಪತ್ನಿಯನ್ನೇ ಕೊಲೆ ಮಾಡಿದ ಪತಿ!

Spread the loveಚಾಮರಾಜನಗರ : ಗರ್ಭಿಣಿಯೊಬ್ಬರನ್ನು ತಾಳಿ ಕಟ್ಟಿದ ಪತಿಯೇ ಕೊಲೆ ಮಾಡಿರುವ ಘಟನೆ ತಾಲೂಕಿನ ಡೊಳ್ಳಿಪುರದ ತೋಟದ ಮನೆಯಲ್ಲಿ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ