ಹಾವೇರಿ: ಕೆಲ ತಿಂಗಳ ಹಿಂದೆ ಸಂದೇಶ ಸೇಟ್(21) ಯುವಕ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.
ಸಂದೇಶನ ಅಕಾಲಿಕ ಸಾವು ತಂದೆ – ತಾಯಿಗೆ ಆಘಾತ ಉಂಟು ಮಾಡಿತ್ತು. ಸಂದೇಶ ಜೀವಂತವಾಗಿದ್ದರೆ ಇಂದಿಗೆ 22ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಆದರೆ ಜನ್ಮದಿನ ಆಚರಿಸಿಕೊಳ್ಳಬೇಕಾಗಿದ್ದ ಮಗ ಈಗ ನೆನಪು ಮಾತ್ರ. ಹಾಗಾಗಿ ಕುಟುಂಬಸ್ಥರು ಸಂದೇಶನ ಹೆಸರನ್ನು ಚಿರಸ್ಥಾಯಿಯಾಗಿಸಲು ಮುಂದಾಗಿದ್ದಾರೆ.
ಸಂದೇಶ ಸೇಟ್ಹೌದು, ಕುಟುಂಬ ಇದೀಗ ಸಂದೇಶ ಹೆಸರಿನಲ್ಲಿ ಹಾವೇರಿ ಸಮೀಪದ ಗಾಂಧಿಪುರ ಗ್ರಾಮದಲ್ಲಿ ಗೋಶಾಲೆಯೊಂದನ್ನು ತೆರೆದಿದೆ. ಸಂದೇಶ ಜನ್ಮದಿನವಾದ ಇಂದು (ನ.20) ಸಂದೇಶ ಗೋಶಾಲೆಯ ಉದ್ಘಾಟನೆ ಕಾರ್ಯಕ್ರಮ ಜರುಗಿತು. ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು ಸಂದೇಶ ಗೋಶಾಲೆಯ ದ್ವಜಾರೋಹಣ ನೆರವೇರಿಸಿದರು. ನಂತರ ಗೋಶಾಲೆ ಉದ್ಘಾಟಿಸಿದ ಶ್ರೀಗಳು, ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು. ನಂತರ ಶ್ರೀಗಳು ಗೋಶಾಲೆಯಲ್ಲಿದ್ದ ಜಾನುವಾರುಗಳಿಗೆ ಮೇವು ತಿನ್ನಿಸಿದರು. ಸಂದೇಶ ಅವರ ತಂದೆ – ತಾಯಿ, ಸಂಬಂಧಿಕರು ಗೋಶಾಲೆಯಲ್ಲಿನ ಜಾನುವಾರುಗಳಿಗೆ ಮೇವು ಹಾಕಿ, ಮಗನನ್ನು ಸ್ಮರಿಸಿದರು.
ಮಾದರಿ ಕಾರ್ಯ: ಈ ಕುರಿತು ಸದಾಶಿವಶ್ರೀಗಳು ಮಾತನಾಡಿ, ಸಂದೇಶನ ಸಾವು ತಂದೆ – ತಾಯಿಗೆ ತೀವ್ರ ನೋವು ತಂದಿದೆ. ತಮ್ಮ ಮಗನ ಹೆಸರನ್ನು ಚಿರಸ್ಥಾಯಿಯಾಗಿಸಲು ದಂಪತಿ ಈ ಗೋಶಾಲೆ ತೆರೆದಿರುವುದು ಮಾದರಿಯಾಗಿದೆ. ಈ ಗೋಶಾಲೆಯನ್ನು ಜಿಲ್ಲೆಯ ರೈತರು, ಜನರು ಸದುಪಯೋಗಪಡಿಸಿಕೊಳ್ಳಬೇಕು. ದಂಪತಿ ಆರಂಭಿಸಿರುವ ಗೋಶಾಲೆ ಸದುಪಯೋಗಪಡಿಸಿಕೊಳ್ಳುವ ಮೂಲಕ ಇವರ ಕಾರ್ಯಕ್ಕೆ ಸಾರ್ಥಕತೆ ತರಬೇಕು ಎಂದು ಮನವಿ ಮಾಡಿದರು.