ಬೆಂಗಳೂರು: ರಾಜ್ಯದಲ್ಲಿ ಹಲವು ವರ್ಷಗಳ ನಂತರ ಮಳೆ ಕೊರತೆಯಿಂದ ಭೀಕರ ಬರಗಾಲ ಎದುರಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ.
ರಾಜ್ಯದಲ್ಲಿ ಸರಿಯಾಗಿ ಮಳೆಯಾಗದ ಕಾರಣ ಸರ್ಕಾರ ಈ ಮೊದಲು 216 ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿತ್ತು. ನಂತರ 7 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈಗಾಗಲೇ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈಗ ಮತ್ತೂ 7 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ಮೂಲಕ ರಾಜ್ಯದಲ್ಲಿ ಬರಕ್ಕೆ ತುತ್ತಾದ ತಾಲೂಕುಗಳ ಸಂಖ್ಯೆ ಬರೋಬ್ಬರಿ 223ಕ್ಕೆ ಏರಿಕೆಯಾಗಿದೆ.
ಬರದ ಹಿನ್ನೆಲೆಯಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಒಟ್ಟು 39,74,741.34 ಹೆಕ್ಟೇರ್‌ನಷ್ಟು ಫಸಲು ನಷ್ಟವಾಗಿದೆ ಎಂಬ ಬೆಳೆ ನಷ್ಟದ ಮಾಹಿತಿಯನ್ನು ರಾಜ್ಯ ಸರ್ಕಾರ ನೀಡಿದೆ. ಭತ್ತ, ರಾಗಿ, ಬೇಳೆಕಾಳು, ಕಡಲೆ ಬೀಜ, ಹತ್ತಿ, ಕಬ್ಬು, ಹೊಗೆಸೊಪ್ಪು ಸೇರಿದಂತೆ ವಿವಿಧ ಬೆಳೆಗಳು ನಷ್ಟವಾಗಿದ್ದು, ಇದಕ್ಕೆ ಮಳೆ ಕೊರತೆಯೇ ಕಾರಣ. ಈ ವರ್ಷ ಮುಂಗಾರು ಕೈಕೊಟ್ಟಿದೆ. ಅಲ್ಲದೆ, ಹಿಂಗಾರು ಮಳೆ ಕೂಡ ವಾಡಿಕೆಗಿಂತ ಕಡಿಮೆ ಆಗಲಿದೆ. ರಾಜ್ಯದಲ್ಲಿ ಶೇ.28ರಷ್ಟು ಮಳೆ ಕೊರತೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಶೇ. 73ರಷ್ಟು ಮಳೆ ಕೊರತೆ ಆಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಈಗ ಬೆಳೆ ಇಳುವರಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.
ಮುಂಗಾರು ಹಂಗಾಮಿನಲ್ಲಿ ನಿಗದಿತ ಗುರಿಯ ಶೇ. 89ರಷ್ಟು ಬಿತ್ತನೆಯಾಗಿದ್ದರೂ ಇಳುವರಿ ಕೈಗೆ ಸಿಗುವುದು ಖಚಿತವಾಗಿಲ್ಲ. ಇನ್ನು ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲು ರೈತರು ಹಿಂದೇಟು ಹಾಕಿದ್ದಾರೆ. ಇದರ ಪರಿಣಾಮವಾಗಿ ಆಹಾರ ಉತ್ಪಾದನೆ ಕುಸಿತ ನಿಶ್ಚಿತವಾಗಿದೆ. ರಾಜ್ಯದಲ್ಲಿ ಒಟ್ಟು ಶೇ. 26ರಷ್ಟು ಮಳೆ ಕೊರತೆ ಆಗಿದೆ. 82.35 ಲಕ್ಷ ಹೆಕ್ಟೇರ್ ಬದಲು 73.26 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದ್ದು, ಒಟ್ಟು 1.48 ಕೋಟಿ ಟನ್ ಆಹಾರ ಧಾನ್ಯ ಹಾಗೂ 13.84 ಲಕ್ಷ ಟನ್ ಎಣ್ಣೆಕಾಳುಗಳ ಉತ್ಪಾದನೆ ಗುರಿ ಇತ್ತು. ಆದರೆ ಸುಮಾರು 45 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿ ಆಗಿದೆ.