ವಾರಂಗಲ್ (ತೆಲಂಗಾಣ): ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್‌ಎಸ್ ಮತ್ತು ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇದರೊಂದಿಗೆ ರಾಜಕೀಯ ಪಕ್ಷಗಳ ನಾಯಕರ ನಡುವೆ ಮಾತಿನ ಸಮರ ತೀವ್ರವಾಗಿದೆ.
ತೆಲಂಗಾಣ ವಿಧಾನಸಭಾ ಚುನಾವಣೆಗೆ 15 ದಿನ ಬಾಕಿ ಇದೆ. ಇಂದು ಪೂರ್ವ ವಾರಂಗಲ್‌ನಲ್ಲಿ ರೋಡ್‌ಶೋ ನಡೆಸಿ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಬಿಆರ್‌ಎಸ್ ಎರಡೂ ಒಂದೇ. ಒಂದು ಪಕ್ಷ ದೆಹಲಿಯಲ್ಲಿ ಮತ್ತು ಇನ್ನೊಂದು ಪಕ್ಷ ತೆಲಂಗಾಣದಲ್ಲಿ ಇರೋದಷ್ಟೇ ವ್ಯತ್ಯಾಸ. ಎರಡು ಪಕ್ಷಗಳ ನಡುವೆ ಪರಸ್ಪರ ನಂಟಿದ್ದು, ಒಬ್ಬರಿಗೊಬ್ಬರು ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಲೋಕಸಭೆಯಲ್ಲಿ ಬಿಆರ್‌ಎಸ್‌ನ ಪ್ರತಿನಿಧಿಗಳು ಪ್ರಧಾನಿಯವರ ಒಂದೇ ಸನ್ನೆಯಲ್ಲಿ ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ನಾನು ನನ್ನ ಕಣ್ಣುಗಳಿಂದ ನೋಡಿದ್ದೇನೆ. ಜಿಎಸ್‌ಟಿ, ರೈತರ ಕಾನೂನು, ನೋಟು ಅಮಾನ್ಯೀಕರಣದ ಸಮಯದಲ್ಲಿ ಪ್ರಧಾನಿಗೆ ಅಗತ್ಯವಿದ್ದಾಗ ಬಿಆರ್‌ಎಸ್ ಜೊತೆ ಇತ್ತು. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ಪ್ರಮುಖ ವಿರೋಧ ಪಕ್ಷವಾಗಿ ಪ್ರಾಬಲ್ಯ ಸಾಧಿಸುತ್ತಿರುವುದರಿಂದ ಪ್ರಧಾನಿ ಮೋದಿ ತೆಲಂಗಾಣದಲ್ಲಿ ಕಾಣಿಸುತ್ತಿಲ್ಲ ಎಂದು ಕುಟುಕಿದರು.