ರಾಯಚೂರು: ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹಟ್ಟಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ (ಚಿನ್ನದಗಣಿ) ಕಳೆದ ಅ.26 ರಂದು ಕೆಮಿಕಲ್ ಹಾಗೂ ಮಾರಕಾಸ್ತ್ರಗಳಿಂದ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ಮೃತ ಲ್ಯಾಬ್ ಟೆಕ್ನಿಷಿಯನ್ ಮಂಜುಳಾ ಅವರ ಮಗ ಸಚಿನ್ ಪಾಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಹಣ ಹಾಗೂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.ಹಟ್ಟಿ ಕ್ಯಾಂಪಿನ ನಿವಾಸಿಗಳಾದ ಮೊಹಮ್ಮದ್ ಕೈಫ್ ಹಾಗೂ ಸಮೀರ್ ಸೊಹೆಲ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 7 ಲಕ್ಷ 49 ಸಾವಿರ ರೂಪಾಯಿ ನಗದು, 9,77,965 ರೂಪಾಯಿ ಮೌಲ್ಯದ 163.34 ಗ್ರಾಂ ಬಂಗಾರದ ಆಭರಣಗಳು, ಅಂದಾಜು 5 ಲಕ್ಷ ಮೌಲ್ಯದ ಒಂದು ಕಾರ್, 25 ಸಾವಿರ ಮೌಲ್ಯದ ಬೈಕ್ ಸೇರಿದಂತೆ ಒಟ್ಟು 22 ಲಕ್ಷದ 51 ಸಾವಿರದ 965 ರೂ. ಜಪ್ತಿ ಮಾಡಿಕೊಳ್ಳಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಬಂಧಿತ ಆರೋಪಿಗಳು ಸಚಿನಪಾಲ್ ಸ್ನೇಹಿತರಾಗಿದ್ದು, ಹಣಕ್ಕಾಗಿ ಇಂತಹ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ನಡೆದ ದಿನದಂದು ಮೃತ ಮಂಜುಳಾ ಸಹೋದರನ ದೂರಿನ ಮೇಲೆ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಇದಾದ ನಂತರದಲ್ಲಿ ಮೃತಳ ಮಗ ಸಚಿನ್‌ಪಾಲ್ ತನ್ನ ತಾಯಿಯನ್ನು ಕೊಲೆ ಮಾಡಿದ್ದಾರೆ ಎಂದು ಹಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಿಂದಾಗಿ ಈ ಪ್ರಕರಣ ಹೊಸ ತಿರುವು ಸಿಕ್ಕಿತು. ಇದೀಗ ಪೊಲೀಸರು ಪ್ರಕರಣ ಭೇದಿಸಿದ್ದಾರೆ.