ಮಂಗಳೂರು : ಕಡಲನಗರಿ ಮಂಗಳೂರಿನಲ್ಲಿ ಹಲವು ಯೋಜನೆಗಳು ಪ್ರಗತಿಯಲ್ಲಿದೆ.
ಇದೀಗ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣವಾಗಿದೆ. ಇಲ್ಲಿ ಒಲಿಂಪಿಕ್ಗೂ ತಯಾರಿ ನಡೆಸಲು ತರಬೇತಿ ಸಿಗುತ್ತದೆ ಎಂಬುದು ವಿಶೇಷವಾಗಿದೆ.
ನಗರದ ಎಮ್ಮೆಕೆರೆಯಲ್ಲಿ 2.50 ಎಕರೆ ಪ್ರದೇಶದಲ್ಲಿ ಈ ಈಜುಕೊಳ ನಿರ್ಮಾಣಗೊಂಡಿದೆ. ಸಾಧಾರಣವಾಗಿ ಈಜುಕೊಳಗಳು ನೆಲ ಅಂತಸ್ತಿನಲ್ಲಿರುತ್ತವೆ. ಕೆಲವೊಂದು ಬಹುಮಹಡಿಯ ಮೇಲಂತಸ್ತಿನಲ್ಲಿ ಸಣ್ಣ ಮಟ್ಟಿನ ಈಜುಕೊಳ ಇದೆಯಾದರೂ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳಗಳು ನೆಲ ಅಂತಸ್ತಿನಲ್ಲಿರುತ್ತವೆ. ಆದರೆ ಮಂಗಳೂರಿನಲ್ಲಿ ನಿರ್ಮಾಣವಾದ ಈ ಈಜುಕೊಳವು ನೆಲದಲ್ಲಿರದೆ ಬದಲಾಗಿ ಎರಡನೇ ಅಂತಸ್ತಿನಲ್ಲಿದೆ.
ಈಜು ತರಬೇತಿಗೆ, ಮಕ್ಕಳಿಗೆ ಹಾಗೂ ಸ್ಪರ್ಧೆಗೆಂದು ಮೂರು ಪ್ರತ್ಯೇಕ ಈಜುಕೊಳ ಇಲ್ಲಿ ನಿರ್ಮಾಣ ಮಾಡಲಾಗಿದೆ. ಈ ಈಜುಕೊಳಕ್ಕೆ 12ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಬಳಿಕ ಹೆಚ್ಚುವರಿ ಅನುದಾನ ಬಿಡುಗಡೆಯಾಗಿ ಇದೀಗ 24.94ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿದೆ. 2 ಎಕರೆ ಪ್ರದೇಶದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣವಾಗಿದೆ.
ಈಜುಕೊಳದ ನೆಲಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಯಿದ್ದು, ಪ್ರಥಮ ಮಹಡಿಯಲ್ಲಿ ಜಿಮ್, ಡ್ರೆಸ್ ಚೇಜಿಂಗ್ ರೂಂ, ಶೌಚಾಲಯ, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಲಾಕರ್ ವ್ಯವಸ್ಥೆ, ಉದ್ದೀಪನ ತಪಾಸಣಾ ಲ್ಯಾಬ್ ಇದೆ. ಎರಡನೇ ಮಹಡಿಯಲ್ಲಿ ಮೂರು ಈಜುಕೊಳಗಳಿವೆ. ಈಜು ಕೊಳದ ಪಕ್ಕದಲ್ಲಿ ಕೆಫೆಟೇರಿಯಾ, 400 ಮಂದಿ ಕುಳಿತುಕೊಳ್ಳಬಹುದಾದ ಗ್ಯಾಲರಿ ವ್ಯವಸ್ಥೆಯಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲು ಈ ಎಲ್ಲಾ ಸೌಲಭ್ಯವನ್ನು ಕಲ್ಪಿಸಲಾಗಿದೆ.