ಬೆಳಗಾವಿ: ಬೆಳಕಿನ ಹಬ್ಬ ದೀಪಾವಳಿಯನ್ನು ರಾಜ್ಯಾಧ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.
ದೀಪಾವಳಿ ವಿಶೇಷ ಎಂದರೆ ದೀಪ ಬೆಳಗಿಸುವುದು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಪಡುವ ಹಬ್ಬ. ಆದರೆ ಈ ಸಡಗರ ಮಧ್ಯೆ ಪಟಾಕಿ ಸಿಡಿಸಲು ಹೋಗಿ ಅದೆಷ್ಟೋ ಅವಘಡಗಳು ಸಂಭವಿಸಿ ಯುವಕರು, ಮಕ್ಕಳು ಕಣ್ಣು ಕಳೆದುಕೊಂಡಿದ್ದಾರೆ. ಇಂತಹ ಘಟನೆಗಳು ಪ್ರತಿವರ್ಷವೂ ನಡೆಯುತ್ತಲೇ ಇವೆ. ಜತೆಗೆ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಮನಗಂಡ ಬೆಳಗಾವಿ ಜಿಲ್ಲಾಡಳಿತ ಪರಿಸರಕ್ಕೆ ಮಾರಕವಾಗಿರುವ ಪಟಾಕಿಗಳನ್ನು ಬ್ಯಾನ್ ಮಾಡಿ ಹಸಿರು ಪಟಾಕಿಗಳನ್ನೇ ಬಳಸುವಂತೆ ಆದೇಶ ಹೊರಡಿಸಿದೆ.
ವಿವಿಧ ರೀತಿಯ ಪಟಾಕಿಗಳ ಸಿಡಿತದಿಂದ ಉಂಟಾಗುವ ಶಬ್ದ ಹಾಗೂ ವಾಯು ಮಾಲಿನ್ಯವನ್ನು ನಿಯಂತ್ರಣದಲ್ಲಿಡಲು, ಸಾರ್ವಜನಿಕ ಆಸ್ತಿ ಹಾಗೂ ಆರೋಗ್ಯ ಸಂರಕ್ಷಣೆಯ ಹಿತದೃಷ್ಠಿಯಿಂದ ಭಾರತ ಸರ್ಕಾರದ ಪರಿಸರ (ಸಂರಕ್ಷಣಾ) ನಿಯಮಾವಳಿ 1986 ತಿದ್ದುಪಡಿ 1999 ಮತ್ತು 2000 ಅಡಿಯಲ್ಲಿ ನಿಗದಿಪಡಿಸಿರುವ ಮಾನಕಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ 12-11-2020 ರಲ್ಲಿ ಕರ್ನಾಟಕ ಸರಕಾರವು ಸುತ್ತೋಲೆ ಹೊರಡಿಸಿರುತ್ತದೆ. ಅದರಂತೆ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೆ ಇತರ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶ ಹೊರಡಿಸಿದ್ದಾರೆ.