ಬೆಂಗಳೂರು: ಮಾಜಿ ಸಿಎಂ ಮತ್ತು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ನಾಲ್ಕು ಗ್ಯಾರಂಟಿಗಳ ವೈಫಲ್ಯದ ಬಗ್ಗೆ ದಾಖಲೆಗಳ ಸಮೇತ ಮಾಜಿ ಸಿಎಂ ಮಾತನಾಡಿದರು. ತೆಲಂಗಾಣದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ನ ಭರವಸೆಗಳನ್ನು ನಂಬಬೇಡಿ, ಗ್ಯಾರಂಟಿಗಳಿಗೆ ಮರುಳಾಗಬೇಡಿ, ಕಾಂಗ್ರೆಸ್ ಮೋಸ ಮಾಡುತ್ತಿದೆ ಎಂದು ಹೆಚ್ಡಿಕೆ ಆರೋಪಿಸಿದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ ಎಂದು ಡೂಪ್ಲಿಕೇಟ್ ಸಿಎಂ ಹೇಳಿದ್ದಾರೆ. ಅಲ್ಲಿ ಸರ್ಕಾರ ಮಾಡಿ ಏನು ಮಾಡುತ್ತೀರಿ, ಆ ರಾಜ್ಯವನ್ನೂ ಮುಳುಗಿಸುತ್ತೀರಿ? ಪಂಚ ರಾಜ್ಯಗಳಲ್ಲಿ ಮತದಾನಕ್ಕೂ ಎರಡು ದಿನ ಮುನ್ನ ಕಾಂಗ್ರೆಸ್ ವೋಚರ್ ನೀಡಿ ಐದು ಸಾವಿರ ಮೊತ್ತದ ಉಡುಗೊರೆ ಆಮಿಷ ಒಡ್ಡುತ್ತಿದ್ದಾರೆ. ನಂಬಬೇಡಿ, ಇದಕ್ಕೆ ಬಲಿಯಾಗಬೇಡಿ. ಗೃಹಲಕ್ಷ್ಮಿ ಯೋಜನೆಯಡಿ ಸಿಎಂ ಕ್ಷೇತ್ರದಲ್ಲೇ ಲಕ್ಷಕ್ಕೂ ಹೆಚ್ಚು ಜನರಿಗೆ ಮೊದಲ ಕಂತಿನ ಹಣ ಸಿಕ್ಕಿಲ್ಲ. ಅಷ್ಟರಲ್ಲೇ ತೆಲಂಗಾಣದಲ್ಲಿ ಭಾಷಣ ಮಾಡುತ್ತಿದ್ದಾರೆ. ಶಕ್ತಿ ಕಾರ್ಯಕ್ರಮದಿಂದಾಗಿ ಮಕ್ಕಳು ಬಸ್ಸಿಲ್ಲದೆ ಜೆಸಿಬಿನಲ್ಲಿ ಕೂತು ಶಾಲಾ ಕಾಲೇಜುಗಳಿಗೆ ಹೋಗಿತ್ತಿದ್ದಾರೆ. ಮಕ್ಕಳಿಗೆ ಹೆಚ್ಚುಕಮ್ಮಿ ಆದರೆ ಕುಟುಂಬದ ಕಥೆ ಏನು? ಇದೇನಾ ನಿಮ್ಮ ಅಭಿವೃದ್ಧಿ?. ನಿಮ್ಮ ಗ್ಯಾರಂಟಿ ಕೊಡುಗೆ? ದೇಶಕ್ಕೆ ವಿಸ್ತರಿಸಲು ಹೊರಟಿದ್ದಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.