ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಿ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅರಭಾವಿ ಶಾಸಕ

ಮೂಡಲಗಿ : ರೈತ ಸಮುದಾಯಕ್ಕೆ ಅನುಕೂಲ ಕಲ್ಪಿಸಿಕೊಡಲು ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಸಂಜೆ ತಹಶೀಲ್ದಾರ ಕಛೇರಿಯ ಸಭಾಗೃಹದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

 

ಇತ್ತೀಚಿನ ದಿನಗಳಲ್ಲಿ ನಮ್ಮ ತಾಲೂಕುಗಳಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲವೆಂಬ ರೈತರಿಂದ ದೂರುಗಳು ಬರುತ್ತಿವೆ. ಕೃಷಿ ಬೆಳೆಗಳಿಗಾಗಿ ರೈತರಿಗೆ ನಾವು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕಾಗಿದೆ. ನಿರಂತರವಾಗಿ ಕನಿಷ್ಠ 7 ಗಂಟೆಗಳ ಕಾಲ ತ್ರೀಫೇಸ್ ವಿದ್ಯುತ್ ಪೂರೈಕೆ ಮಾಡಲು ಅಧಿಕಾರಿಗಳು ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಈಗಾಗಲೇ ಹೊಸ ರಸ್ತೆ ಕಾಮಗಾರಿಗಳಿಗಾಗಿ ಸರ್ಕಾರವು ಅನುಮೋದನೆ ನೀಡುತ್ತಿಲ್ಲ. ಈಗಿರುವ ಪ್ರಗತಿಯಲ್ಲಿರುವ ಹಾಗೂ ಹದಗೆಟ್ಟಿರುವ ರಸ್ತೆಗಳನ್ನು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಬೇಕು. ರಸ್ತೆಗಳನ್ನು ಈಗಾಗಲೇ ನಿರ್ಮಿಸುತ್ತಿದ್ದರೂ ಪದೇ ಪದೇ ಹಾಳಾಗುತ್ತಿವೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿಗಳ ಮೇಲೆ ನಿಗಾ ವಹಿಸಿ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

 

ಈ ವರ್ಷ ಮಳೆ ಕೈಕೊಟ್ಟಿದ್ದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರವಾಗಬಹುದು. ಹಿಡಕಲ್ ಜಲಾಶಯದಲ್ಲಿ ಸಂಗ್ರಹವಿರುವ ನೀರನ್ನು ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ನವ್ಹೆಂಬರ್ 15 ರ ನಂತರ ಬಿಡುಗಡೆ ಮಾಡುವ ಮುನ್ಸೂಚನೆ ನೀಡಿದ ಅವರು, ಕಾಲುವೆಯ ಕೊನೆ ಭಾಗದ ರೈತರಿಗೆ ನೀರು ತಲುಪಿಸಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಕಾಲುವೆಗಳ ಮೇಲೆ ಸಂಚರಿಸಬೇಕು. ನಾವು ಕೂಡ ಇಷ್ಟರಲ್ಲಿಯೇ ಕಾಲುವೆಗಳನ್ನು ಪರಿಶೀಲಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಮೆಳವಂಕಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಕ್ರಮ ಕೈಗೊಳ್ಳಬೇಕು. ಆದಷ್ಟು ಬೇಗನೆ ಪ್ರಗತಿಯಲ್ಲಿರುವ ಜೆಜೆಎಂ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕೆಲವೆಡೆ ಕಳಪೆ ಹಾಗೂ ಅಪೂರ್ಣಗೊಂಡ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ನಿಗಾ ವಹಿಸಿ ಪ್ರತಿ ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಿಥಿಲಗೊಂಡ ಕುಲಗೋಡ ಮತ್ತು ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುರಸ್ಥಿಗಾಗಿ ಸಂಬಂಧಿಸಿದವರು ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಕುಲಗೋಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಡೆಂಗ್ಯೂ ಜ್ವರ ಬಾಧೆಗೆ ಅಗತ್ಯವಿರುವ ಎಲ್ಲ ಮುನ್ಸೂಚನೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದರು.

 

 


ಈಗಾಗಲೇ ಮೂಡಲಗಿ ಮತ್ತು ಗೋಕಾಕ ತಾಲೂಕುಗಳನ್ನು ಸರ್ಕಾರ ಬರ ಪೀಡಿತ ಪ್ರದೇಶವೆಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಬರಗಾಲದಿಂದ ಹಾನಿಗೊಳಗಾದ ಬೆಳೆಗಳ ಸಮೀಕ್ಷೆ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿ ರೈತರಿಗೆ ಬರ ಪರಿಹಾರ ನೀಡಬೇಕು. ಸರ್ಕಾರಿ ಕಾರ್ಯಕ್ರಮಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮೂಡಲಗಿ ತಹಶೀಲ್ದಾರ ಶಿವಾನಂದ ಬಬಲಿ, ಗೋಕಾಕ ತಹಶೀಲ್ದಾರ ಮೋಹನ ಭಸ್ಮೆ, ಮೂಡಲಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ. ಚಿನ್ನನ್ನವರ, ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಉದಯಕುಮಾರ ಕಾಂಬಳೆ, ತಾಲೂಕಾ ಆರೋಗ್ಯಾಧಿಕಾರಿ ಡಾ.ಮುತ್ತಣ್ಣ ಕೊಪ್ಪದ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಲ್ಲಪ್ಪ ಗದಾಡಿ, ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಲ್ಲಿಕಾರ್ಜುನ ಜನಮಟ್ಟಿ, ಲೋಕೋಪಯೋಗಿ ಇಲಾಖೆ ಎಇಇ ಅನೀಲಕುಮಾರ ಶಿಂಗೆ, ಗೋಕಾಕ ಬಿಇಓ ಜಿ.ಬಿ. ಬಳಗಾರ, ಹೆಸ್ಕಾಂ ಇಇ ಮೂಡಲಗಿ, ಜಿಆರ್‍ಬಿಸಿ ಕೌಜಲಗಿ ಎಇಇ ಬಿ.ಎಸ್. ಪಾಟೀಲ, ಭೂಸೇನಾ ನಿಗಮದ ಎಇಇ ಆರ್.ಪಿ. ನಾರಾಯಣಕರ, ಮೂಡಲಗಿ ಪಿಎಸ್‍ಐ ಎಚ್.ವಾಯ್. ಬಾಲದಂಡಿ ಸೇರಿದಂತೆ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಮೂಡಲಗಿ ಬಿಇಓ ಅಜೀತ ಮನ್ನಿಕೇರಿ ಸ್ವಾಗತಿಸಿದರು.


Spread the love

About Laxminews 24x7

Check Also

ಕರೆಂಟ್ ಶಾಕ್ ಹೊಡೆದು ಅಣ್ಣ-ತಮ್ಮ ಇಬ್ಬರೂ ಸಾವು

Spread the love ವಿಜಯಪುರ: ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಅಣ್ಣ-ತಮ್ಮ ಇಬ್ಬರೂ ಸಾವನ್ನಪ್ಪಿರುವ ದಾರುಣ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ