ಲಖನೌನ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿ ಆಗಲಿವೆ. ಸತತ 5 ಗೆಲುವು ಕಂಡಿರುವ ಟೀಮ್ ಇಂಡಿಯಾ ಒಂದು ವಾರದ ಬಿಡುವಿನ ನಂತರ ಮತ್ತೊಂದು ಜಯವನ್ನು ಎದುರು ನೋಡುತ್ತಿದೆ. ಇಂಗ್ಲೆಂಡ್ ತಂಡಕ್ಕೆ ಈ ಗೆಲುವು ಅನಿವಾರ್ಯವಾಗಿದ್ದು, ಇಂದಿನ ಪಂದ್ಯವನ್ನೂ ಸೋತರೆ ವಿಶ್ವಕಪ್ ಕನಸು ಬಹುತೇಕ ಭಗ್ನ.
ಲಖನೌ (ಉತ್ತರ ಪ್ರದೇಶ): ನ್ಯೂಜಿಲೆಂಡ್ ವಿರುದ್ಧದ ಗೆಲುವಿನ ನಂತರ ಸೆಮಿಫೈನಲ್‌ನಲ್ಲಿ ಸ್ಥಾನ ಗಳಿಸುವ ಗುರಿಯೊಂದಿಗೆ ರೆಡ್-ಹಾಟ್ ಮತ್ತು ಇನ್ ಫಾರ್ಮ್ ಟೀಂ ಇಂಡಿಯಾ ಧರ್ಮಶಾಲಾದಿಂದ ಲಖನೌಗೆ ಬಂದಿಳಿದಿದೆ. ಮತ್ತೊಂದೆಡೆ, ಹಾಲಿ ಚಾಂಪಿಯನ್ ಇಂಗ್ಲೆಂಡ್ ಸತತ ಸೋಲಿನಿಂದ ಮೇಲೇರಲು ಹೆಣಗಾಡುತ್ತಿದೆ. ವಿಶ್ವಕಪ್ ಅಂಕಪಟ್ಟಿಯಲ್ಲಿ ಆಂಗ್ಲರು ತಳ ತಲುಪಿದ್ದಾರೆ. ಹಾಗಾಗಿ, ಇಂದಿನ ಪಂದ್ಯ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಸತತ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಕಿವೀಸ್ ವಿರುದ್ಧ ಮೈದಾನಕ್ಕಿಳಿಯುವಾಗ ಭಾರತಕ್ಕೆ ಪ್ರಮುಖ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೊರತೆ ಎದ್ದು ಕಾಣುತ್ತಿತ್ತು. ಆದರೆ ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್ ಅವರ ಬದಲಾವಣೆಯೊಂದಿಗೆ ಮೈದಾನಕ್ಕಿಳಿದ ತಂಡ ಯಶಸ್ಸು ಕಂಡು ಸತತ ಐದನೇ ಗೆಲುವು ಪಡೆದುಕೊಂಡಿತ್ತು. ಇಂಗ್ಲೆಂಡ್ ವಿರುದ್ಧ ಮತ್ತೆ ಆಡುವ ಹನ್ನೊಂದರಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಅನುಭವಿ ಅಶ್ವಿನ್ ಲಖನೌ ಕ್ರೀಡಾಂಗಣದಲ್ಲಿ ಆಡುವ ನಿರೀಕ್ಷೆ ಇದೆ.
ಸೂರ್ಯಕುಮಾರ್ ಯಾದವ್ ವಿಶ್ವಕಪ್‌ನ ಚೊಚ್ಚಲ ಪಂದ್ಯದಲ್ಲಿ ರನ್ಔಟ್ಗೆ ಬಲಿಯಾದರು. ಇಂದಿನ ಪಂದ್ಯದಲ್ಲಿ ಅವರಿಗೆ ಮತ್ತೊಂದು ಅವಕಾಶ ಸಿಗುವುದೇ? ಎಂದು ಕಾದುನೋಡಬೇಕಿದೆ. ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಗೋಲ್ಡನ್ ಫಾರ್ಮ್‌ನಲ್ಲಿರುವುದು ತಂಡಕ್ಕೆ ನೆರವಾಗುತ್ತಿದೆ. ಯುವ ಆಟಗಾರರು ಮಧ್ಯಮ ಕ್ರಮಾಂಕದಲ್ಲಿ ಸಾಥ್ ನೀಡುತ್ತಿದ್ದಾರೆ.
ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ದೊಡ್ಡ ಇನ್ನಿಂಗ್ಸ್ ಆಡುವುದರಲ್ಲಿ ಎಡವಿದ್ದಾರೆ. ಆದರೆ ಫಾರ್ಮ್‌ನಲ್ಲಿರುವುದು ಕಂಡು ಬರುತ್ತಿದೆ. ಜ್ವರದಿಂದ ಮೊದಲೆರಡು ಪಂದ್ಯ ಆಡದ ಗಿಲ್, ಪಾಕಿಸ್ತಾನದ 26, ಬಾಂಗ್ಲಾದೇಶ 53 ಮತ್ತು ನ್ಯೂಜಿಲೆಂಡ್ ವಿರುದ್ಧ 36 ರನ್ ಗಳಿಸಿದರು. ಅಯ್ಯರ್ ಸಹ ದೊಡ್ಡ ಇನ್ನಿಂಗ್ಸ್ ಕಟ್ಟುವನ್ನು ವಿಫಲರಾಗುತ್ತಿದ್ದಾರೆ.
ಇಂಗ್ಲೆಂಡ್ ಸತತ ವೈಫಲ್ಯ: ಎರಡನೇ ಪಂದ್ಯದಲ್ಲಿ ಅಫ್ಘನ್ ವಿರುದ್ಧ ಗೆದ್ದಿರುವುದು ಬಿಟ್ಟರೆ ಇಂಗ್ಲೆಂಡ್ ಸತತ ಸೋಲು ಕಾಣುತ್ತಿದೆ. ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್ನಲ್ಲೂ ಎಡವುತ್ತಿದೆ. ಬೌಲರ್ಗಳು ದಾರಾಳವಾಗಿ ರನ್ ನೀಡಿದರೆ, ಬ್ಯಾಟರ್ಗಳು ಗುರಿ ಬೆನ್ನತ್ತುವಲ್ಲಿ ಸೋತಿದ್ದಾರೆ. ಸ್ಟೋಕ್ಸ್ ತಂಡಕ್ಕೆ ಮರಳಿರುವುದು ಭರವಸೆ ನೀಡಿದೆ. ಆದರೂ, ಎರಡು ಪಂದ್ಯದಲ್ಲಿ ಅವರು ಅಂತಹ ಪ್ರಭಾವ ಬೀರಿಲ್ಲ.
ಸಂಭಾವ್ಯ ತಂಡಗಳು- ಭಾರತ: ರೋಹಿತ್ ಶರ್ಮಾ, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಆರ್.ಅಶ್ವಿನ್ / ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ.
ಇಂಗ್ಲೆಂಡ್: ಡೇವಿಡ್ ಮಲನ್, ಜಾನಿ ಬೈರ್‌ಸ್ಟೋವ್, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್‌ಸ್ಟೋನ್/ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಮಾರ್ಕ್ ವುಡ್
ಪಂದ್ಯ: ಭಾರತೀಯ ಕಾಲಮಾನ ಮಧ್ಯಾಹ್ನ 2ಕ್ಕೆ.
ಸ್ಥಳ: ಲಖನೌ ಏಕಾನಾ ಕ್ರೀಡಾಂಗಣ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಮತ್ತು ಡಿಸ್ನಿ ಪ್ಲಸ್ ಹಾಟ್ಸ್ಟಾರ್