Breaking News

“ಒಲಿಂಪಿಕ್ಸ್​ ಕ್ರೀಡಾಕೂಟ ಆತಿಥ್ಯ ವಹಿಸಲು ಭಾರತ ಸಿದ್ಧ”: ಗೋವಾದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ಉದ್ಘಾಟಿಸಿದ ಪ್ರಧಾನಿ ಮೋದಿ

Spread the love

ಪಣಜಿ (ಗೋವಾ): ಮೊದಲ ಬಾರಿಗೆ ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 37ನೇ ಆವೃತ್ತಿಯ ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉದ್ಘಾಟಿಸಿದರು.

ದಕ್ಷಿಣ ಗೋವಾದ ಮಾರ್ಗಾವೊದಲ್ಲಿರುವ ಪಂಡಿತ್​ ಜವಾಹರ್​ಲಾಲ್​ ನೆಹರು ಕ್ರೀಡಾಂಗಣದಲ್ಲಿ ಅ.​ 26ರಿಂದ ನ.​ 9ರವರೆಗೆ ನಡೆಯಲಿರುವ ಕ್ರೀಡಾಕೂಕ್ಕೆ ದೇಶದ ಅಥ್ಲೀಟ್​ಗಳು ಹಸ್ತಾಂತರಿಸಿದ ಆಟಗಳನ್ನು ಪ್ರತಿನಿಧಿಸುವ ಜ್ಯೋತಿ(Infinity Flame) ಯನ್ನು ಸ್ವೀಕರಿಸುವ ಮೂಲಕ ಮೋದಿ ಚಾಲನೆ ನೀಡಿದರು.

ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, “ಇಂದು ಭಾರತದ ಸಂಕಲ್ಪ ಹಾಗೂ ಪ್ರಯತ್ನಗಳು ದೊಡ್ಡ ಮಟ್ಟದಲ್ಲಿರುವಾಗ ಅದಕ್ಕೆ ತಕ್ಕಂತೆ ಆಕಾಂಕ್ಷೆಗಳು ಹೆಚ್ಚಾಗುವುದು ಕೂಡ ಸಹಜವೇ. ಹಾಗಾಗಿಯೇ ಐಒಸಿ (IOC) ಅಧಿವೇಶನದಲ್ಲಿ 140 ಕೋಟಿ ಭಾರತೀಯರ ಆಕಾಂಕ್ಷೆಯನ್ನು ಮುಂದಿಟ್ಟಿದ್ದು, 2030 ಹಾಗೂ 2036ರಲ್ಲಿ ಯೂತ್​ ಒಲಿಂಪಿಕ್ಸ್​ ಆಯೋಜಿಸಲು ಭಾರತ ಸಿದ್ಧವಾಗಿದೆ ಎನ್ನುವ ಭರವಸೆಯನ್ನು ಒಲಿಂಪಿಕ್ಸ್​ನ ಸುಪ್ರೀಂ ಸಮಿತಿಗೆ ನೀಡಿದ್ದೇನೆ. ಭಾರತದಲ್ಲಿ ಒಲಿಂಪಿಕ್ಸ್​ ಆಯೋಜಿಸುವ ನಮ್ಮ ಆಶಯ ಕೇವಲ ಒಂದು ಭಾವನೆ ಮಾತ್ರವಲ್ಲದೇ ಅದರ ಹಿಂದೆ ಬಲವಾದ ಕಾರಣಗಳಿವೆ. 2036ರಲ್ಲಿ ಸುಲಭವಾಗಿ ಒಲಿಂಪಿಕ್ಸ್​ ಅನ್ನು ಆಯೋಜನೆ ಮಾಡುವಷ್ಟು ಭಾರತದ ಆರ್ಥಿಕತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಹೊಂದಿರುತ್ತದೆ.” ಎಂದು ಹೇಳಿದರು.

“ನಮ್ಮ ರಾಷ್ಟ್ರೀಯ ಕ್ರೀಡಾಕೂಟ ಕೂಡ ಏಕ್​ ಭಾರತ್​ ಶ್ರೇಷ್ಠ ಭಾರತ್​ನ ಸಂಕೇತವಾಗಿದೆ. ಕೆಲವು ವರ್ಷಗಳಲ್ಲಿ ಸಂಪರ್ಕಕ್ಕೆ ಸಂಬಂಧಿಸಿದ ಆಧುನಿಕ ಮೂಲಸೌಕರ್ಯಗಳನ್ನು ಸಹ ಗೋವಾದಲ್ಲಿ ನಿರ್ಮಿಸಲಾಗಿದೆ. 15 ದಿನಗಳ ಕಾಲ ಗೋವಾದಲ್ಲಿ ನಡೆಯಲಿರುವ ಈ ರಾಷ್ಟ್ರೀಯ ಕ್ರೀಡಾಕೂಟದಿಂದ ಗೋವಾದ ಪ್ರವಾಸೋದ್ಯಮ ಹಾಗೂ ಆರ್ಥಿಕತೆಗೂ ಹೆಚ್ಚು ಪ್ರಯೋಜನವಾಗಲಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಅಧ್ಯಕ್ಷೆ ಪಿಟಿ ಉಷಾ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು, ಮಕ್ಕಳು ಕೆಲವು ಮಲ್ಕಾಂಬ್ ಪ್ರದರ್ಶನಗಳನ್ನು ಸಹ ಪ್ರದರ್ಶಿಸಿದರು. ಗೋವಾ ಸಿಎಂ ಪ್ರಮೋದ್​ ಸಾವಂತ್ ಮಾತನಾಡಿ, “ಗೋವಾದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾಕೂಟ ನಡೆಯುತ್ತಿದ್ದು, ಇದು ರಾಜ್ಯದ ಹಿರಿಮೆಗೆ ಮತ್ತೊಂದು ಗರಿ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗೋವಾದ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಅವರು ರಾಜ್ಯದ ಸಂಸ್ಕೃತಿ ಹಾಗೂ ಅಸ್ಮಿತೆಯ ಸಂಕೇತವಾದ ಕುಂಬು ಶಾಲು ಹೊದಿಸಿ ಪ್ರಧಾನಿ ಮೋದಿ ಅವರನ್ನು ಸನ್ಮಾನಿಸಿದರು. 15 ದಿನಗಳ ಕಾಲ ಪಂಡಿತ್​ ಜವಾಹರ್​ಲಾಲ್​ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ದೇಶದ ಸುಮಾರು 10,000 ಕ್ಕೂ ಹೆಚ್ಚು ಕ್ರೀಡಾಪಟುಗಳು ವಿವಿಧ 28 ಸ್ಥಳಗಳಲ್ಲಿ 43 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.

ಗೋವಾ ಅತಿ ದೊಡ್ಡ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುತ್ತಿದ್ದು, ಈ ಬಾರಿ ಬೀಚ್ ಫುಟ್‌ಬಾಲ್, ರೋಲ್ ಬಾಲ್, ಗಾಲ್ಫ್, ಸೆಪಕ್ಟಕ್ರಾ, ಸ್ಕೇ ಮಾರ್ಷಲ್ ಆರ್ಟ್ಸ್, ಕಲ್ಲೇರಿಪಟ್ಟು ಮತ್ತು ಪೆನ್‌ಕಾಕ್ ಸಿಲಾಟ್ ಸೇರಿದಂತೆ ಪದಕದ ಹಂತದಲ್ಲಿ ಹಲವಾರು ಹೊಸ ಕ್ರೀಡಾ ವಿಭಾಗಗಳು ಚೊಚ್ಚಲ ಪ್ರವೇಶ ಪಡೆಯಲಿವೆ. ಈ ಹಿಂದೆ, ನೀರಜ್ ಚೋಪ್ರಾ, ಸಾನಿಯಾ ಮಿರ್ಜಾ, ಮೀರಾಬಾಯಿ ಚಾನು, ಸಜನ್ ಪ್ರಕಾಶ್, ಮನು ಭಾಕರ್ ಮತ್ತು ಅನೇಕರು ಸೇರಿದಂತೆ ಹಲವಾರು ಪ್ರಮುಖ ಭಾರತೀಯ ಅಥ್ಲೀಟ್‌ಗಳ ಭಾಗವಹಿಸುವಿಕೆಗೆ ರಾಷ್ಟ್ರೀಯ ಕ್ರೀಡಾಕೂಟ ಸಾಕ್ಷಿಯಾಗಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ