ಪುಣೆ (ಮಹಾರಾಷ್ಟ್ರ): ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಂದು ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ಬಾಂಗ್ಲಾದೇಶದ ನಾಯಕ ನಜ್ಮುಲ್ ಹೊಸೈನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ರೋಹಿತ್ ಶರ್ಮಾ ಪಡೆಯ ಭಾರತಕ್ಕೆ ಕ್ಷೇತ್ರ ರಕ್ಷಣೆಯ ಹೊಣೆ ಹೊರೆಸಿದ್ದಾರೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಇಂದಿನ ಪಂದ್ಯದ ಆತಿಥ್ಯ ವಹಿಸಿಕೊಂಡಿದೆ.
ಈ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಸತತ ಮೂರು ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್ ಬರೆದರೆ, ಬಾಂಗ್ಲಾ ಆಡಿದ ಮೂರು ಪಂದ್ಯಗಳಲ್ಲಿ ಒಂದನ್ನು ವಶಕ್ಕೆ ಪಡೆದರೆ ಎರಡು ಪಂದ್ಯಗಳನ್ನು ಕೈಚೆಲ್ಲಿದೆ. ಉಭಯ ತಂಡಗಳಿಗೆ ಇದು ನಾಲ್ಕನೆ ಪಂದ್ಯವಾಗಿದೆ. ಭಾರತ ತಂಡ ಇಂದಿನ ಪಂದ್ಯವನ್ನು ಗೆದ್ದರೆ ನೆಟ್ ರನ್ ರೇಟ್ ಮತ್ತು ಅಂಕಟ್ಟಿಯಲ್ಲಿ ಮೊದಲ ಸ್ಥಾನವನ್ನು ಹಾಗೆಯೇ ಉಳಿಸಿಕೊಳ್ಳಲಿದೆ. ಉಭಯ ತಂಡಗಳ ನಡುವೆ ನಡೆದ ಕೊನೆಯ ನಾಲ್ಕು ಏಕದಿನ ಪಂದ್ಯಗಳಲ್ಲಿ ಬಾಂಗ್ಲಾದೇಶ ಮೂರು ಬಾರಿ ಭಾರತವನ್ನು ಸೋಲಿಸಿದೆ. ಅದೇ ಉತ್ಸಾಹದಲ್ಲಿರುವ ಬಾಂಗ್ಲಾ ಇಂದಿನ ಪಂದ್ಯಕ್ಕೆ ಅವಕಾಶ ಮಾಡಿಕೊಡುತ್ತಾ ಅನ್ನೋದನ್ನು ಕಾದುನೋಡಬೇಕಿದೆ.
ಗಾಯಗೊಂಡಿರುವ ಬಾಂಗ್ಲಾ ತಂಡದ ನಾಯಕ ಶಕೀಬ್ ಅಲ್ ಹಸನ್ ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದು, ಅವರ ಬದಲಿಗೆ ನಜ್ಮುಲ್ ಹೊಸೈನ್ ಶಾಂಟೋ ಹಂಗಾಮಿ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇನ್ನು ಭಾರತ ತಂಡದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಡೆಂಘಿ ಜ್ವರದಿಂದ ಚೇತರಿಸಿಕೊಂಡಿರುವ ಭಾರತದ ಭರವಸೆಯ ಆಟಗಾರ ಶುಭ್ಮನ್ ಗಿಲ್ ಇಂದಿನ ಪಂದ್ಯದಲ್ಲಿ ಆಡಲಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹೇಳಿಕೊಳ್ಳುವಷ್ಟು ರನ್ ನೀಡಲಿಲ್ಲ. ಆದರೆ, ಇಂದಿನ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್ ನೀಡುವ ನೀರಿಕ್ಷೆಯಲ್ಲಿದ್ದಾರೆ. ಆದರೆ, ಪ್ರತಿಭೆಗಳಿಂದ ತುಂಬಿರುವ ಬಾಂಗ್ಲಾದೇಶ, ಭಾರತದ ಬ್ಯಾಟ್ಸಮನ್ಸ್ಗಳನ್ನು ಆದಷ್ಟು ಬೇಗ ಕಟ್ಟಿಹಾಕುವ ರಣತಂತ್ರ ಕೂಡ ರೂಪಿಸಿಕೊಂಡಿದೆ.