Breaking News

ಆಯುಧಪೂಜೆಗೆ ವಿಧಾನಸೌಧ, ವಿಕಾಸಸೌಧದಲ್ಲಿ ಅರಿಶಿನ ಕುಂಕುಮ ಬಳಸದಂತೆ ಸುತ್ತೋಲೆ: ಸಿಎಂ ಸ್ಪಷ್ಟನೆ

Spread the love

ಬೆಂಗಳೂರು: ಆಯುಧಪೂಜೆಯ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಅರಿಶಿನ, ಕುಂಕುಮ ಸೇರಿದಂತೆ ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಹೊರಡಿಸಿರುವ ವಿಚಾರ ಹೊಸತೇನಲ್ಲ. ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುತ್ತವೆ. ಇದರಿಂದಾಗುವ ಹಾನಿ ತಪ್ಪಿಸಲು ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ನಾವೂ ಪಾಲಿಸಿದ್ದೇವೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಜನತೆಯಲ್ಲಿ ಮನವಿ ಮಾಡಿದ್ದಾರೆ.

 

ಸರ್ಕಾರದ ಸುತ್ತೋಲೆ: ವಿಧಾನಸೌಧ, ವಿಕಾಸಸೌಧ ಹಾಗು ಬಹುಮಹಡಿ ಕಟ್ಟಡಗಳಲ್ಲಿ ಆಯುಧ ಪೂಜಾ ಸಮಯದಲ್ಲಿ ರಾಸಾಯನಿಕಯುಕ್ತ ಬಣ್ಣಗಳನ್ನು ಕಾರಿಡಾ‌ರ್​ಗಳಲ್ಲಿ ಬಳಸಬಾರದು. ಕಚೇರಿಗಳ ಒಳಗೆ ಮತ್ತು ಕಾರಿಡಾರ್‌ಗಳಲ್ಲಿ ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ಬಳಸುವುದರಿಂದ ಹಾನಿಕಾರಕ ಬಣ್ಣವು ನೆಲಹಾಸುವಿನ ಮೇಲೆ ಬಿದ್ದು, ಸುಮಾರು ತಿಂಗಳುಗಳ ಕಾಲ ಹಾಗೆಯೇ ನೆಲಹಾಸುವಿನ ಮೇಲೆ ಅಂಟಿಕೊಂಡು ಉಳಿಯುತ್ತವೆ. ಇದರಿಂದ ಕಟ್ಟಡದ ನೆಲಹಾಸುಗಳ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಈ ಕುರಿತಂತೆ, ಹಿಂದಿನ ಸಾಲುಗಳಲ್ಲಿಯೂ ಸಹ ಅನೇಕ ಸುತ್ತೋಲೆಗಳನ್ನು ಹೊರಡಿಸಿದ್ದು, ಕೆಲವು ಇಲಾಖೆ/ಶಾಖೆಗಳಲ್ಲಿ ಈ ಸೂಚನೆಗಳನ್ನು ಪಾಲನೆ ಮಾಡಿಲ್ಲ.

ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ಈ ತಿಂಗಳಲ್ಲಿ ಆಯುಧ ಪೂಜೆ ನೆರವೇರಿಸುವಾಗ ಕಚೇರಿಯ ಒಳಗೆ ಕಾರಿಡಾರ್‌ಗಳಲ್ಲಿ ಕುಂಬಳಕಾಯಿ ಮತ್ತು ರಂಗೋಲಿಗಳಲ್ಲಿ ಯಾವುದೇ ರೀತಿಯ ರಾಸಾಯನಿಕ ಮಿಶ್ರಿತ ಬಣ್ಣ/ಕುಂಕುಮ/ಅರಿಶಿನ/ಸುಣ್ಣ ಹಾಗೂ ಇನ್ನಿತರ ವಸ್ತುಗಳನ್ನು ಕಡ್ಡಾಯವಾಗಿ ಬಳಸದಂತೆ ತಿಳಿಸಲಾಗಿದೆ. ಪೂಜಾ ದಿನದಂದು ಕಚೇರಿಯಿಂದ ಹೊರಡುವ ಮುನ್ನ ದೀಪಗಳನ್ನು ಹಾಗೂ ವಿದ್ಯುತ್‌ ಸ್ವಿಚ್‌ಗಳನ್ನು ನಂದಿಸಿ ತೆರಳುವಂತೆ ತಿಳಿಸಲಾಗಿದೆ. ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ವ್ಯವಸ್ಥಿತವಾಗಿ ವಿಲೇವಾರಿ ಮಾಡಬೇಕೆಂದು ಸುತ್ತೋಲೆಯ ಸೂಚನೆ ನೀಡಲಾಗಿದೆ.

ಪಾರಂಪರಿಕ ಕಟ್ಟಡಗಳ ಸೌಂದರ್ಯವನ್ನು ಕಾಪಾಡುವುದು ಪ್ರತಿಯೊಬ್ಬ ಅಧಿಕಾರಿ/ನೌಕರರ ಆದ ಕರ್ತವ್ಯವಾಗಿದ್ದು, ಮೇಲೆ ತಿಳಿಸಲಾದ ಸೂಚನೆಗಳನ್ನು ಸ್ವಯಂಪ್ರೇರಿತರಾಗಿ ಪಾಲಿಸುವ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದು ಸೂಕ್ತ. ಆದಾಗ್ಯೂ ಸ್ಪಂದಿಸದಿದ್ದಲ್ಲಿ, ಸಂಬಂಧಪಟ್ಟ ಇಲಾಖೆ/ಶಾಖೆಯವರ ಮೇಲೆ ಅನಿವಾರ್ಯವಾಗಿ ಜವಾಬ್ದಾರಿಯನ್ನು ನಿಗದಿಪಡಿಸಬೇಕಾಗುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ