Breaking News

ಪವಿತ್ರ ಕಾವೇರಿ ತೀರ್ಥೋದ್ಭವ ಕಣ್ತುಂಬಿಕೊಂಡ ಭಕ್ತಗಣ : ಹಲವು ಗಣ್ಯರು ಭಾಗಿ

Spread the love

ಕೊಡಗು : ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವದ ಕ್ಷಣಕ್ಕೆ ಸಾಕ್ಷಿಯಾದರು.

ಕೊಡಗಿನ ಕುಲದೇವಿ, ನಾಡಿನ ಜೀವನದಿ ಕಾವೇರಿ ನಿಗದಿಯಂತೆ ಕರ್ಕಾಟಕ ಲಗ್ನದಲ್ಲಿ ರಾತ್ರಿ 1 ಗಂಟೆ 26 ನಿಮಿಷಕ್ಕೆ ತೀರ್ಥರೂಪಿಣಿಯಾಗಿ ನೆರೆದಿದ್ದ ಭಕ್ತರಿಗೆ ದರ್ಶನ ನೀಡಿದಳು.

ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್. ಬೋಸರಾಜ್, ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ.ಮಂಥರ್ ಗೌಡ, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ವೆಂಕಟರಾಜ, ಜಿ. ಪಂ. ಮುಖ್ಯಕಾಯ೯ನಿವ೯ಹಣಾಧಿಕಾರಿ ವಣಿ೯ತ್ ನೇಗಿ, ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್, ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು. ಜೊತೆಗೆ ಸಿನಿಮಾರಂಗದ ನವಜೋಡಿ ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಚ ಕೂಡ ತೀರ್ಥರೂಪಿಣಿ ಕಾವೇರಿ ಮಾತೆಯನ್ನು ಕಣ್ತುಂಬಿಕೊಂಡರು. ರಾಜ್ಯದ ಹಲವೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಪುಣ್ಯ ತೀಥ೯ವನ್ನು ಸ್ವೀಕರಿಸಿದರು.

ತಲಕಾವೇರಿಯಲ್ಲಿ ಮಂಗಳವಾರ ಸಂಜೆ 5ರಿಂದಲೇ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಸಹಸ್ರ ನಾಮಾರ್ಚನೆ, ಪುಷ್ಪಾರ್ಚನೆ ಮತ್ತು ಕುಂಕುಮಾರ್ಚನೆ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಮತ್ತೊಂದೆಡೆ ಕಾವೇರಿ ತೀರ್ಥೋದ್ಭವವನ್ನು ವೀಕ್ಷಿಸಲು ಸಾವಿರಾರು ಭಕ್ತರು ಭಾಗಮಂಡಲದಿಂದ 8 ಕಿಲೋಮೀಟರ್ ದೂರದ ತಲಕಾವೇರಿವರೆಗೆ ಕಾಲ್ನಡಿಗೆಯಲ್ಲಿ ಆಗಮಿಸಿದ್ದರು. ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟ ಭಕ್ತರು ಕಾವೇರಿ ಮಾತೆಯನ್ನು ನೆನೆಯುತ್ತ ತಲಕಾವೇರಿ ತಲುಪಿದರು. ಕೊಡಗು ಜಿಲ್ಲೆಯಿಂದ ಮಾತ್ರವಲ್ಲದೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯ ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯ ಭಕ್ತರು ತಲಕಾವೇರಿಗೆ ಆಗಮಿಸಿದ್ದರು.

ಕಾವೇರಿ ತಾಯಿಯ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಬ್ರಹ್ಮಕುಂಡದಲ್ಲಿ ಬರುವ ಪವಿತ್ರ ಕಾವೇರಿ ಜಲವನ್ನು ಸಂಗ್ರಹಿಸಲು ಜನರು ಮುಂಜಾನೆಯಿಂದ ಕಾದು ಕುಳಿತಿದ್ದರು. ವಿಶೇಷವಾಗಿ ಕಾವೇರಿ ತನ್ನ ಸಹೋದರಿ ಗಂಗೆಯೊಂದಿಗೆ ಸೇರಿ ತುಲಾ ಸಂಕ್ರಮಣದ ಈ ಪುಣ್ಯ ಕಾಲದಲ್ಲಿ ತೀರ್ಥಸ್ವರೂಪಿಣಿಯಾಗಿ ಉಕ್ಕಿ ಬರುವುದರಿಂದ, ಅಂದು ತಲಕಾವೇರಿಯಲ್ಲಿ ಪುಣ್ಯಸ್ನಾನ ಮಾಡಿ ತೀರ್ಥ ಸೇವನೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತೆಂಬ ನಂಬಿಕೆ ಭಕ್ತರಲ್ಲಿದೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ