ಬೆಂಗಳೂರು : “ಬಿಜೆಪಿ ಮತ್ತು ಜನತಾದಳದವರು ಹತಾಶೆಯ ಅಂತಿಮ ಸ್ಥಿತಿ ತಲುಪಿದ್ದಾರೆ.
ಅವರಿಗೆ ಡಾಕ್ಟರ್‌ಗಳೇ ಮೇಜರ್ ಆಪರೇಶನ್ ಮಾಡಬೇಕು” ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಸದಾಶಿವನಗರದ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ನಿಮ್ಮ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದೆ ಎಂದು ಹೇಳಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಹಾಗೆಲ್ಲ ಎಲ್ಲದರಲ್ಲೂ ಅನುಮಾನಪಡಲು ಆಗಲ್ಲ. ಜಗದೀಶ್ ಶೆಟ್ಟರ್ ಅವರು, ತಮ್ಮ ಶಕ್ತಿ ಏನಿದೆ ಎಂದು ತೋರಿಸಿದ್ದಾರೆ. ಈ ಬಗ್ಗೆ ನಾನೇನು ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದರು.
ಬಿಜೆಪಿಯ ತಂಡವೊಂದು ಸರ್ಕಾರ ಬೀಳಿಸಲು ಯತ್ನಿಸುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿ, “ನನಗೆ ಎಲ್ಲಾ ಗೊತ್ತಿದೆ. ಯಾವ ಶಾಸಕರನ್ನು, ಯಾರು ಯಾವಾಗ ಭೇಟಿ ಮಾಡಿದರು, ಏನು ಮಾಡುತ್ತಿದ್ದಾರೆ ಎಂದು ಸಂಬಂಧಪಟ್ಟವರೇ ನನಗೆ ಮತ್ತು ಸಿಎಂಗೆ ಮಾಹಿತಿ ನೀಡುತ್ತಿದ್ದಾರೆ. “ಬಿಜೆಪಿಯವರು ಏನು ಆಫರ್ ಕೊಡುತ್ತಿದ್ದಾರೆ ಅನ್ನೋದನ್ನೂ ಹೇಳಿದ್ದಾರೆ. ನಮ್ಮ ಬಳಿ ಪ್ರತಿಯೊಂದು ಮಾಹಿತಿ ಇದೆ. ಯಾರನ್ನೆಲ್ಲ ಭೇಟಿಯಾಗಿದ್ದಾರೆ ಎಂಬುದನ್ನು ಅಧಿವೇಶನದಲ್ಲಿ ಹೇಳಿಸುತ್ತೇನೆ” ಎಂದು ತಿಳಿಸಿದರು.
ಬೆಂಗಳೂರು ಅಭಿವೃದ್ಧಿಗೆ ನೀಲನಕ್ಷೆ : ನಾಗರಿಕರ ಧ್ವನಿಯೇ ನಮ್ಮ ಸರ್ಕಾರದ ಧ್ವನಿ. ಹೀಗಾಗಿ ‘ಬ್ರ್ಯಾಂಡ್ ಬೆಂಗಳೂರು’ ಯೋಜನೆಗೆ ನಗರದ ಜನರ ಅಭಿಪ್ರಾಯ ಸಂಗ್ರಹಿಸಿ, ಅವರ ನಿರೀಕ್ಷೆಗೆ ತಕ್ಕಂತೆ ನಾವು ಬೆಂಗಳೂರು ಅಭಿವೃದ್ಧಿಯ ನೀಲನಕ್ಷೆ ಸಿದ್ದಪಡಿಸಲಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದರು.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಬ್ರ್ಯಾಂಡ್ ಬೆಂಗಳೂರು’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ಬೆಂಗಳೂರಿಗೆ ಅಂಟಿರುವ ಗಾರ್ಬೇಜ್ ಸಿಟಿ, ಟ್ರಾಫಿಕ್ ಸಿಟಿ ಎಂಬ ಕಳಂಕವನ್ನು ತೊಡೆದು ಹಾಕುತ್ತೇವೆ. ಪ್ರತಿ ರಸ್ತೆಯಲ್ಲಿ ಕ್ಯೂಆರ್ ಕೋಡ್ ಹಾಕಿ ಅಲ್ಲಿನ ಕಾಮಗಾರಿ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡುತ್ತೇವೆ. ಜನರಿಗೆ ಆ ರಸ್ತೆಯ ಕಾಮಗಾರಿ ಕುರಿತು ಪಾರದರ್ಶಕ ಮಾಹಿತಿ ನೀಡಲಿದ್ದೇವೆ ಎಂದು ಹೇಳಿದ್ದರು.