ಮೈಸೂರು: ”ಮೈಸೂರು ಮಹಾರಾಜರ ಕಾಲದಿಂದಲೂ ಕೂಡ ಕನ್ನಡ ನಾಡಿನಲ್ಲಿ ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಹೆಚ್ಚಿನ ರೀತಿಯ ಪ್ರೋತ್ಸಾಹ ನೀಡಲಾಗುತ್ತಿದೆ.
ಸಾಹಿತ್ಯ, ಸಂಸ್ಕೃತಿಗೆ ಹೆಸರಾದ ಜಿಲ್ಲೆ ಮೈಸೂರು. ಮೈಸೂರು ಸಾಹಿತ್ಯ ನೆಲೆಯ ತವರೂರು ಎಂದರೆ ತಪ್ಪಾಗಲಾರದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಅರಮನೆ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ”ಕರ್ನಾಟಕ ಸರ್ಕಾರವು ಈವರೆಗೆ 30 ಪ್ರಶಸ್ತಿಗಳನ್ನು ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಪ್ರಮುಖರಿಗೆ ನೀಡುತ್ತಾ ಬಂದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಸಾಧಕರಿಗೆ ನೀಡುವ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ಮೈಸೂರಿನವರೇ ಆದ ಡಾ. ಪದ್ಮ ಮೂರ್ತಿ ಅವರಿಗೆ ನೀಡುತ್ತಿರುವುದು ನಮಗೆ ಹೆಮ್ಮೆಯ ವಿಷಯ” ಎಂದರು.
”ಈ ಪ್ರಶಸ್ತಿಯನ್ನು ಮೊದಲ ಬಾರಿಗೆ ಗಾನ ಗಂಧರ್ವ ಪುಟ್ಟರಾಜು ಗವಾಯಿ ಅವರಿಗೆ ನೀಡಿತ್ತು. ಮೈಸೂರಿನ ಮಹಾರಾಜರ ಕಾಲದಲ್ಲಿ ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಗಳಿಗೆ ಪ್ರೋತ್ಸಾಹವನ್ನು ನೀಡುತ್ತಿರುವಂತೆಯೇ ಅದೇ ರೀತಿ ನಮ್ಮ ಸರ್ಕಾರ ಕೂಡ ವಿವಿಧ ಕ್ಷೇತ್ರಗಳಿಗೆ ಪ್ರೋತ್ಸಾಹ ಕೊಡುತ್ತಿದೆ” ಎಂದ ಅವರು, ಸಾಧಕರಾದ ಪದ್ಮಾ ಮೂರ್ತಿಯವರ ತಂದೆ ಹಿರಿಯ ವಕೀಲರಾಗಿದ್ದರು. ಪದ್ಮಾ ಮೂರ್ತಿಯವರ ದೀರ್ಘಕಾಲ ಸಂಗೀತ ಸೇವೆಯನ್ನು ಗುರುತಿಸಿ ಸರ್ಕಾರವು ಅವರಿಗೆ ಪ್ರಶಸ್ತಿಯನ್ನು ನೀಡುವುದು ಶ್ಲಾಘನೀಯ ವಿಷಯವಾಗಿದೆ ಎಂದು ಹೇಳಿದರು.
”ನಮ್ಮ ನಾಡ ಹಬ್ಬ ಮೈಸೂರು ದಸರಾಕ್ಕೆ ಯಾವುದೇ ಕೊರತೆಯಾಗದಂತೆ ಜಿಲ್ಲಾಡಳಿತ, ಜಿಲ್ಲೆಯ ಸಚಿವರು ಶ್ರಮಿಸಿ ಸಾಂಸ್ಕೃತಿಕ ಮೆರುಗು ನೀಡುವ ಕಾರ್ಯಕ್ರಮಗಳನ್ನು ರಚಿಸಿದ್ದಾರೆ. ನಾಡಹಬ್ಬ ಮೈಸೂರು ದಸರಾ 9 ದಿನಗಳ ಕಾಲ ನಡೆಯಲಿದ್ದು, ಪ್ರತಿಯೊಬ್ಬರು ಕೂಡ ಈ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು” ಎಂದು ಕರೆ ನೀಡಿದರು.