ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಗುತ್ತಿಗೆದಾರರು ಜೊತೆಯಾಗಿ ಲೂಟಿ ಮಾಡುತ್ತಿದ್ದು, ಕಾಂಟ್ರಾಕ್ಟರ್ ಅಸೋಸಿಯೇಷನ್ ಸರ್ಕಾರದ ಕಮಿಷನ್ ಕಲೆಕ್ಷನ್ ಸೆಂಟರ್ ಆಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ.
ಅಕ್ರಮ ಹಣ ಪತ್ತೆಯಾಗಿರುವ ಕುರಿತು ಇಡಿ ಹಾಗೂ ಸಿಬಿಐ ಎರಡೂ ತನಿಖೆಯಾಗಲಿ ಎಂದು ಆಗ್ರಹಿಸಿದ ಅವರು, ರಾಜ್ಯ ಸರ್ಕಾರ ಬಂದಾಗಿನಿಂದ ವರ್ಗಾವಣೆಯಿಂದ ಹಿಡಿದು ಎಲ್ಲದರಲ್ಲೂ ಭ್ರಷ್ಟಾಚಾರ ಇದೆ.
ಬಹಿರಂಗವಾಗಿಯೇ ಕಮಿಷನ್ ದಂಧೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಯಾದ ತಕ್ಷಣವೇ ಗುತ್ತಿಗೆದಾರನ ಸಂಬಂಧಿಕರ ಮನೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಸಿಕ್ಕಿರುವುದು ಇದೇ ಮೊದಲು. ಸರ್ಕಾರ 10% ಕಮಿಷನ್ ಪಡೆದಿರುವದು ಸಾಬೀತಾಗಿದೆ. ಇನ್ನಷ್ಟು ಗುತ್ತಿಗೆದಾರರ ಮನೆಮೇಲೆ ದಾಳಿ ಮಾಡಿದರೆ ಇನಷ್ಟು ಕಮಿಷನ್ ಹಣ ಹೊರ ಬರಲಿದೆ ಎಂದರು.
ಗುತ್ತಿಗೆದಾರರ ಸಂಘದವರು ನಮ್ಮ ಮೆಲೆ ಯಾವುದೇ ದಾಖಲೆ ಇಲ್ಲದೇ ಆರೋಪ ಮಾಡಿದ್ದರು. ಈಗ ಕಾಂಟ್ರಾಕ್ಟರ್ ಅಸೋಷಿಯೇಷನ್ ಸರ್ಕಾರದ ಕಮಿಷನ್ ಕಲೆಕ್ಷನ್ ಸೆಂಟರ್ ಆಗಿದೆ. ಈ ಹಿಂದೆ ಇದೇ ವ್ಯಕ್ತಿ ಲಂಚ ಕೊಟ್ಟಿರುವ ಆರೋಪ ಬಂದಾಗ ಆತ ನಾನು ಕಾಂಟ್ರಾಕ್ಟ್ ಮಾಡಿಲ್ಲ ಅಂತ ಹೇಳಿದ್ದರು. ಕಾಂಟ್ರಾಕ್ಟರ್ ಮತ್ತು ಸರ್ಕಾರ ಒಂದಾಗಿ ರಾಜ್ಯ ಲೂಟಿ ಮಾಡಿದ್ದಾರೆ. ಅಕ್ರಮ ಹಣ ಸಂಗ್ರಹದ ಹಿನ್ನೆಲೆಯಲ್ಲಿ ಮನಿ ಲ್ಯಾಂಡರಿಂಗ್ ಆಕ್ಟನಲ್ಲಿ ಇಡಿ ತನಿಖೆ ಆಗಬೇಕು. ಭ್ರಷ್ಟಾಚಾರ ಕಾಯ್ದೆಯಡಿ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗಕ್ಕೆ ಈ ಪ್ರಕರಣ ನೀಡಬೇಕು. ಇಲ್ಲವೇ ಲೋಕಾಯುಕ್ತಕ್ಕೆ ನೀಡಬೇಕು. ಈ ಪ್ರಕರಣದ ಮೂಲ ಪತ್ತೆ ಆಗಬೇಕಾದರೆ ತನಿಖೆ ಆಗಬೇಕು ಎಂದು ಹೇಳಿದರು.