ಶಿವಮೊಗ್ಗ: ಲಾರಿ ಹಾಗೂ ಎರಡು ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿ, ಓರ್ವ ಗಾಯಗೊಂಡಿರುವ ಘಟನೆ ಭದ್ರಾವತಿ ತಾಲೂಕು ಕಲ್ಲಿಹಾಳ್ ಹಾಗೂ ಅರಹತೊಳಲು ಗ್ರಾಮದ ನಡುವೆ ಕಳೆದ ರಾತ್ರಿ ನಡೆದಿದೆ.
ಮರದ ತುಂಡು ತುಂಬಿಕೊಂಡು ಹೊರಟಿದ್ದ ಲಾರಿಗೆ ಬೈಕ್ಗಳು ಮಧ್ಯದಿಂದ ಬಂದು ಡಿಕ್ಕಿ ಹೊಡೆದಿವೆ ಎಂದು ತಿಳಿದುಬಂದಿದೆ.
ಒಂದು ಬೈಕ್ನಲ್ಲಿದ್ದ ಮೂವರು ಅಪ್ರಾಪ್ತರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತರನ್ನು ಭದ್ರಾವತಿ ತಾಲೂಕು ಜಂಬರಘಟ್ಟ ಗ್ರಾಮದ ಶಶಾಂಕ್(17), ಯಶವಂತ್(17) ಹಾಗೂ ವಿಕಾಸ್(17) ಎಂದು ಗುರುತಿಸಲಾಗಿದೆ. ಇನ್ನೊಂದು ಬೈಕ್ನಲ್ಲಿದ್ದ ಅರದೊಟ್ಲು ಗ್ರಾಮದ ಗಗನ್ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಕಲ್ಲಿಹಾಳ್ ಗ್ರಾಮದಲ್ಲಿ ಶನಿವಾರ ನಡೆದ ಗಣಪತಿ ನಿಮಜ್ಜನ ಮೆರವಣಿಗೆ ಮುಗಿಸಿ ವಾಪಸ್ ಆಗುವಾಗ ಈ ಘಟನೆ ನಡೆದಿದೆ. ಈ ಮೂವರು ಸ್ನೇಹಿತರು ಒಂದೇ ಬೈಕ್ನಲ್ಲಿ ಬರುತ್ತಿದ್ದರು. ಲಾರಿ ಸಹ ಕಲ್ಲಿಹಾಳ್ ಕಡೆಯಿಂದ ಕೈಮರಕ್ಕೆ ಬರುತ್ತಿತ್ತು. ಬೈಕ್ನಲ್ಲಿದ್ದವರು ಲಾರಿಯನ್ನು ಹಿಂದಿಕ್ಕಲು ಹೋದಾಗ ಮುಂದೆ ಬೈಕ್ ಬಂದಿದೆ. ಈ ವೇಳೆ ಬೈಕ್ ಪಕ್ಕಕ್ಕೆ ತೆಗೆದುಕೊಳ್ಳಲು ಹೋಗಿ ಚಲಿಸುತ್ತಿದ್ದ ಲಾರಿಯ ಮಧ್ಯ ಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಲಾರಿ ಕೆಳಗೆ ಹೋಗಿ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಘಟನೆ ನಡೆಯುತ್ತಿದ್ದಂತೆಯೇ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7