ಬೆಂಗಳೂರು: “ರಾಜ್ಯ ಸರ್ಕಾರದ ವೈಫಲ್ಯ, ಜನವಿರೋಧಿ ನೀತಿ ಖಂಡಿಸಿ ಜನಜಾಗೃತಿ ಮೂಡಿಸಲು ಗಣಪತಿ ಹಬ್ಬದ ನಂತರ ರಾಜ್ಯ ಪ್ರವಾಸ ಆರಂಭಿಸುತ್ತೇನೆ.
ಇಂದು ಕುರುಡುಮಲೆ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ವಾಪಸ್ ಬರುತ್ತೇನೆ” ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸ ಧವಳಗಿರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾಡಿನ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯ. ಇವತ್ತು ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ದರ್ಶನ ಮಾಡಲು ನಾವೆಲ್ಲ ಒಟ್ಟಾಗಿ ಹೋಗುತ್ತಿದ್ದೇವೆ. ಇಂದು ನಮ್ಮೆಲ್ಲರ ಪ್ರೀತಿಯ ನಾಯಕ, ದೇಶದ ನೆಚ್ಚಿನ ಪ್ರಧಾನಿಗಳಾದ ನರೇಂದ್ರ ಮೋದಿಯವರ ಹುಟ್ಟುಹಬ್ಬ. ಮೋದಿಯವರ ಆರೋಗ್ಯ ವೃದ್ಧಿಸಲಿ. ಅವರು ಮತ್ತೆ ಈ ದೇಶದ ಪ್ರಧಾನಿ ಆಗಲಿ ಎಂದು ಪ್ರಾರ್ಥಿಸಲು ಹೋಗುತ್ತಿದ್ದೇನೆ” ಎಂದರು.
“ರಾಜ್ಯ ಸರ್ಕಾರ ಬರಗಾಲದ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಪಕ್ಷ ಬಲ ಪಡಿಸುವ ದೃಷ್ಟಿಯಿಂದ, ಸರ್ಕಾರದ ವೈಫಲ್ಯತೆಗಳನ್ನು ಜನತೆಗೆ ತಿಳಿಸುವ ದೃಷ್ಟಿಯಿಂದ ನಾವೆಲ್ಲ ಒಟ್ಟಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ” ಎಂದು ಹೇಳಿದರು.
Laxmi News 24×7