ಹುಬ್ಬಳ್ಳಿ: ಸ್ಮಾರ್ಟ್ ವಾಚ್ ವಿಚಾರವಾಗಿ ಸ್ನೇಹಿತರಿಬ್ಬರ ಮಧ್ಯೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ನಗರದ ಬೆಂಗೇರಿಯ ವೆಂಕಟೇಶ ಕಾಲೋನಿಯಲ್ಲಿ ತಡರಾತ್ರಿ ಈ ಘಟನೆ ನಡೆದಿದೆ.
ಸಿದ್ರಾಮನಗರ ನಿವಾಸಿ ಅಸ್ಲಾಂ ಮಕಾಂದಾರ್ (31) ಕೊಲೆಯಾದ ವ್ಯಕ್ತಿ. ಗಾಯತ್ರಿ ನಗರದ ಮಂಜುನಾಥ ನಾಗರಾಜ ಜೀನಹಳ್ಳಿ ಕೊಲೆ ಆರೋಪಿ. ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಮೃತ ಅಸ್ಲಾಂ ಮಕಾಂದಾರ್ ಹಾಗೂ ಅರೋಪಿ ಮಂಜುನಾಥ ಇಬ್ಬರು ಸ್ನೇಹಿತರಾಗಿದ್ದರು. ಕಳೆದ ಕೆಲ ದಿನಗಳ ಹಿಂದೆ ಮಂಜುನಾಥ್ ಅಸ್ಲಾಂಗೆ ಸ್ಮಾರ್ಟ್ ವಾಚ್ ಕೊಟ್ಟಿದ್ದನಂತೆ. ಆದ್ರೆ ಅಸ್ಲಾಂ ವಾಚ್ ಕೊಡದೆ ಸತಾಯಿಸುತ್ತಿದ್ದನಂತೆ. ನಿನ್ನೆ(ಮಂಗಳವಾರ) ರಾತ್ರಿ ಬೆಂಗೇರಿಯ ವೆಂಕಟೇಶ ಕಾಲೋನಿಯಲ್ಲಿ ಎಗ್ ರೈಸ್ ತಿನ್ನುವ ವೇಳೆ ಇದೇ ವಿಷಯವಾಗಿ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಮಂಜುನಾಥ, ಅಸ್ಲಾಂನ ಎದೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿತಕ್ಕೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಸ್ಲಾಂನನ್ನು ಆತನ ಸ್ನೇಹಿತರು ಕಿಮ್ಸ್ಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯ: ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ನಡೆದಿತ್ತು. ಇಲ್ಲಿನ ದೊಡ್ಡೇರಿ ಗ್ರಾಮದ ನರೇಂದ್ರ (35) ಕೊಲೆಯಾದ ವ್ಯಕ್ತಿ. ಈತನನ್ನು ಸಿದ್ದಪುರ ತಾಂಡಾದ ನಿವಾಸಿ ಹರೀಶ್ ಎಂಬಾತ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ ಎನ್ನಲಾಗಿತ್ತು.