ಬೆಳಗಾವಿ: ಇಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿದರು.
ಸಾರ್ವಜನಿಕರಿಂದ ಅನೇಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದಕ್ಷಿಣ ಕ್ಷೇತ್ರದಲ್ಲಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಲೋಕಾಯುಕ್ತ ಎಸ್ಪಿ ಹನುಮಂತರಾಯ್ ನೇತೃತ್ವದಲ್ಲಿ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.
ಬೇನಾಮಿ ಹೆಸರಲ್ಲಿ ಆಸ್ತಿ ಖರೀದಿಗೆ ಅವಕಾಶ ನೀಡದಂತೆ ನೋಂದಣಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೇನಾಮಿ ಹೆಸರಿನಲ್ಲಿ ಆಸ್ತಿ ಖರೀದಿಗೆ ಬಂದರೆ ಅಂಥವರ ವಿರುದ್ಧ ದೂರು ದಾಖಲಿಸಬೇಕು. ಮಾಲೀಕರ ನೈಜ ಮಾಹಿತಿ ಪರಿಶೀಲನೆ ಮಾಡಿದ ಬಳಿಕವೇ ನೋಂದಣಿ ಮಾಡುವಂತೆ ಎಸ್ಪಿ, ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಆನ್ಲೈನ್ ನೋಂದಣಿ ಪ್ರಕ್ರಿಯೆಯನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದರು. ಇತ್ತೀಚಿಗೆ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡುವ ಪಕ್ಷಕಾರರ ನೈಜತೆ ಕುರಿತು ಅವರ ದಾಖಲಾತಿಗಳನ್ನು ಪರಿಶೀಲಿಸುವ ಅಧಿಕಾರವನ್ನು ಸರ್ಕಾರ ಉಪ ನೋಂದಣಾಧಿಕಾರಿಗೆ ಕೊಟ್ಟಿದೆ.
ಇನ್ಮುಂದೆ ಖೊಟ್ಟಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಅಧಿಕಾರವಿದೆ. ಕಾವೇರಿ-2 ಜನರೇಟ್ ಆಗಿದ್ದರಿಂದ ಅಕ್ರಮಕ್ಕೆ ಯಾವುದೇ ರೀತಿ ಅವಕಾಶ ಇಲ್ಲ.
ಹಾಗಾಗಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಲೋಕಾಯುಕ್ತ ಅಧಿಕಾರಿಗಳು ನೋಂದಣಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಲೋಕಾಯುಕ್ತ ಡಿಎಸ್ಪಿ ರಘು, ಡಿಎಸ್ಪಿ ಬಿ.ಎಸ್.ಪಾಟೀಲ, ಇನ್ಸ್ಪೆಕ್ಟರ್ ನಿರಂಜನ ಪಾಟೀಲ ಸೇರಿ ಮತ್ತಿತರರು ಇದ್ದರು.