ಬೆಳಗಾವಿ: ಗಣೇಶೋತ್ಸವಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇವೆ.
ಹೀಗಾಗಿ ಗಣೇಶ ಮೂರ್ತಿ ತಯಾರಕರು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಎಲ್ಲೆಡೆ ಪಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳೇ ರಾರಾಜಿಸುತ್ತಿವೆ. ಆದರೆ ಇಲ್ಲೊಂದು ಕುಟುಂಬ ಆರು ದಶಕಗಳಿಂದ ಮಣ್ಣಿನ ಗಣಪನಿಗೆ ಪ್ರಾಶಸ್ತ್ಯವನ್ನು ಕೊಟ್ಟಿದ್ದು, ನಮಗೆ ಎಷ್ಟೇ ಶ್ರಮವಾದರೂ ಕೂಡ ನಾವು ಮಣ್ಣಿನ ಗಣಪನನ್ನೇ ತಯಾರಿಸುತ್ತೇವೆ ಎನ್ನುತ್ತಿದ್ದಾರೆ.
ಹೌದು, ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಶ್ರೀ ಗಣೇಶ ಚಿತ್ರಕಲಾದ ಮಾಲೀಕ 70 ವರ್ಷದ ಮಾರುತಿ ಜ್ಯೋತಿಬಾ ಕುಂಬಾರ ತಮ್ಮ ಇಳಿ ವಯಸ್ಸಿನಲ್ಲೂ ಶ್ರದ್ಧೆಯಿಂದ ಮೂರ್ತಿ ತಯಾರಿಸುವ ಕಾಯಕದಲ್ಲಿ ತೊಡಗಿದ್ದಾರೆ. 1962ರಿಂದ ಬೆಳಗಾವಿಯಲ್ಲಿ ಮಾರುತಿ ಅವರ ತಂದೆ ಜ್ಯೋತಿಬಾ ಮೂರ್ತಿ ತಯಾರಿಸಲು ಆರಂಭಿಸಿದ್ದರು. ಎರಡನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ ಮಾರುತಿ ತಂದೆಯ ಕಾಯಕವನ್ನೆ ಮುಂದುವರಿಸಿದರು. ಈಗ ಮಾರುತಿ, ಅವರ ಮಕ್ಕಳಾದ ಸಾಗರ, ವಿನಾಯಕ ಸೇರಿ ಐವರು ಕಾರ್ಮಿಕರೊಂದಿಗೆ ಗಣೇಶ ಮೂರ್ತಿ ತಯಾರಿಸುತ್ತಿದ್ದಾರೆ.