ಬೆಂಗಳೂರು : ವಸತಿ ಪ್ರದೇಶದ ಜಾಗವನ್ನು ಪಾರ್ಥನಾ ಸಭಾಂಗಣವಾಗಿ ಬಳಕೆ ಮಾಡುವುದನ್ನು ಪ್ರಶ್ನಿಸಿ ಬೆಂಗಳೂರು ನಗರದ ಎಚ್‌ಬಿಆರ್ ಬಡಾವಣೆಯ ನೂರಾರು ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಸ್ಯಾಮ್ ಪಿ ಫಿಲಿಪ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜೆಎಸ್ ಕಮಲ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಅರ್ಜಿಯನ್ನು ಕೆಲವು ಊಹೆ ಹಾಗೂ ತಪ್ಪು ಕಲ್ಪನೆಗಳಿಂದಾಗಿ ಸಲ್ಲಿಸಲಾಗಿದೆ. ಹಾಗಾಗಿ ಪುರಸ್ಕರಿಸಲಾಗದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಾರ್ಥನೆಯನ್ನು ಸಲ್ಲಿಸುವುದರಿಂದ ಅಪಾಯವಿದೆ ಎಂದರು. ಅದಕ್ಕೆ ತೀವ್ರ ಆಕ್ಷೇಪ ಎತ್ತಿದ ನ್ಯಾಯಪೀಠ, ಪ್ರಾರ್ಥನೆ ಸಲ್ಲಿಸುವುದು ಹೇಗೆ ಬೆದರಿಕೆ ಆಗುತ್ತದೆ ಎಂದು ಪ್ರಶ್ನಿಸಿತು. ಅಲ್ಲದೆ, ನಾವು ನಿಮ್ಮ ವಾದವನ್ನು ಒಪ್ಪುವುದಿಲ್ಲ ಎಂದು ನ್ಯಾಯ ಪೀಠ ಹೇಳಿತು. ಪ್ರಾರ್ಥನೆ ಸಲ್ಲಿಸುವುದು ಹೇಗೆ ಬೆದರಿಕೆ ಆಗುತ್ತದೆ ಹೇಳಿ?.. ನೀವು ಕೋರ್ಟ್ ಮುಂದೆ ವಾದ ಮಂಡಿಸುವಾಗ ಬಹಳ ಜಾಗರೂಕತೆಯಿಂದ ಇರಬೇಕು. ಈ ರೀತಿ ಹೇಳಿಕೆ ನೀಡುವುದನ್ನು ಸಹಿಸಲಾಗದು. ನೀವು ಈ ಬಗ್ಗೆ ಸಹಜವಾಗಿ ಮಾತನಾಡಬಾರದು. ವಕೀಲರಾಗಿ ನೀವು ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಗಾಳಿಯಲ್ಲಿ ತೂರಿ ಹೋಗುವಂತಹ ಹೇಳಿಕೆಗಳನ್ನು ನೀಡುವ ಹಕ್ಕಿಲ್ಲ ಎಂದೂ ನ್ಯಾಯಾಲಯ ಪೀಠ ತಿಳಿಸಿದೆ.
ಅರ್ಜಿದಾರರು ವಸತಿ ಪ್ರದೇಶದ ಸಭಾಂಗಣವನ್ನು ಪ್ರಾರ್ಥನೆಗೆ ಬಳಕೆ ಮಾಡಲಾಗುತ್ತಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ದಾಖಲೆಗಳನ್ನು ಗಮನಿಸಿದರೆ, ಈ ಹಿಂದೆ ವ್ಯಾಜ್ಯ ನಡೆದಿದೆ. ಟ್ರಸ್ಟ್ವೊಂದು ನಿಗದಿತ ಜಾಗದಲ್ಲಿ ದುರ್ಬಲ ವರ್ಗದ ಮಕ್ಕಳ ಶಿಕ್ಷಣಕ್ಕೆ ಮದರಸ ಹಾಗೂ ಪ್ರಾರ್ಥನಾ ಸ್ಥಳವನ್ನಾಗಿ ವಸತಿ ಪ್ರದೇಶವನ್ನು ಬಳಕೆ ಮಾಡಲಾಗಿತ್ತಿದೆ. ಟ್ರಸ್ಟ್ ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿಯಿಂದ ಅನುಮತಿ ಪಡೆಯಲಾಗಿದೆ. ಕೋರ್ಟ್ ಕಟ್ಟಡ ನಿರ್ಮಾಣ ಮುಂದುವರಿಕೆಗೆ ಅನುಮತಿ ನೀಡಿದೆ ಎಂದು ಪೀಠ ತಿಳಿಸಿದೆ.
ಅರ್ಜಿದಾರರು ಪ್ರಾರ್ಥನೆ ಮಾಡುವುದರಿಂದ ಹೇಗೆ ಸಮಸ್ಯೆಯಾಗುತ್ತಿದೆ ಎಂಬುದರ ಬಗ್ಗೆ ಯಾವುದೇ ವಿವರಗಳನ್ನಾಗಲಿ ಅಥವಾ ಸಾಕ್ಷ್ಯಗಳನ್ನಾಗಲಿ ನೀಡಿಲ್ಲ. ಜತೆಗೆ ಕಟ್ಟಡದ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಹಾಗಾಗಿ ಈ ಅರ್ಜಿಯನ್ನು ಪರಿಗಣಿಸಲಾಗದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
Laxmi News 24×7