ಬೆಂಗಳೂರು : ಪ್ರತಿನಿತ್ಯ 10,000 ಕ್ಯೂಸೆಕ್ನಂತೆ 15 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸುವ ನಿರ್ಧಾರವನ್ನು ಪುನರ್‌ಪರಿಶೀಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಇಂದು ಗೃಹ ಕಚೇರಿ ಕೃಷ್ಣಾ ಬಳಿ ಮಾತನಾಡಿದ ಅವರು, ನಮ್ಮಲ್ಲಿ ಮಳೆ ಕೊರತೆಯಿಂದ ನೀರಿನ ಅಭಾವ ಹೆಚ್ಚಾಗಿದೆ. ಆದರೂ ಆರಂಭದಲ್ಲಿ ನಾವು ತಮಿಳುನಾಡಿಗೆ ನೀರು ಹರಿಸಿದ್ದೇವೆ. ಹೀಗಿದ್ದರೂ ಅವರನ್ನು ತೃಪ್ತಿಪಡಿಸಲು ಆಗುತ್ತಿಲ್ಲ. ನಮಗೆ ಕೃಷಿ ಉದ್ದೇಶಕ್ಕಿಂತ ಕುಡಿಯುವ ಉದ್ದೇಶಕ್ಕೆ ನೀರು ಇಟ್ಟುಕೊಳ್ಳುವುದು ಮುಖ್ಯ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರಕ್ಕೆ ನಿರ್ಧಾರವನ್ನು ಪುನರ್‌ಪರಿಶೀಲಿಸುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.
ನಾವು ಆರಂಭದಲ್ಲಿ ಸ್ವಲ್ಪ ನೀರು ಬಿಟ್ಟಿದ್ದೇವೆ. ಆದರೆ ಅದು ಅವರಿಗೆ ಸಮಾಧಾನ ಇಲ್ಲ. ನಮ್ಮಲ್ಲೂ ನೀರಿಗೆ ಬರ ಇದೆ. ಆದೇಶ ನೀಡಿರುವ ಅಥಾರಿಟಿಗೆ ಪುನರ್ ಪರಿಶೀಲಿಸುವಂತೆ ನಾವು ಮನವಿ ಮಾಡುತ್ತೇವೆ. ನಮ್ಮಲ್ಲಿ ಬೆಳೆ ಬೆಳೆಯುವುದಕ್ಕೆ, ಕುಡಿಯಲು ನೀರಿನ ಸಮಸ್ಯೆ ಎದುರಾಗುತ್ತಿದೆ. ನಾವು ಬಿಟ್ಟ ನೀರು ಅಲ್ಲಿಗೆ ಹೋಗಿ ತಲುಪಲು 5 ದಿನ ಆಗ್ತಿದೆ. ಈ ವಿಚಾರವನ್ನು ಅಥಾರಿಟಿಗೆ ಗಮನಕ್ಕೆ ತರುತ್ತೇವೆ. ನೀರನ್ನು ಉಪಯೋಗಿಸಿಕೊಂಡು ತಮಿಳುನಾಡು ರೈತರು ಸಾಕಷ್ಟು ಬೆಳೆ ಬೆಳೆದಿದ್ದಾರೆ. ನಮ್ಮಲ್ಲಿ ಸಾಕಷ್ಟು ಬರ ಇದೆ. ಆದ್ರೆ ನಾವು ಏನೇ ಹೇಳಿದ್ರೂ ಅವರು ಯಾವಾಗಲು ಬೇಡಿಕೆ ಮಾಡೇ ಮಾಡ್ತಾರೆ ಎಂದರು.
ಸರ್ವಪಕ್ಷ ಸಭೆ ಕರೆಯುತ್ತೇವೆ: ಕುಮಾರಸ್ವಾಮಿಯವರು ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಕೇಳಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಕೇವಲ ಕಾವೇರಿ ವಿಚಾರ ಮಾತ್ರವಲ್ಲ, ಮಹದಾಯಿ, ಕೃಷ್ಣ ಸೇರಿದಂತೆ ರಾಜ್ಯದ ಪ್ರಮುಖ ವಿಚಾರಗಳ ಬಗ್ಗೆ ಸರ್ವಪಕ್ಷಗಳ ಜೊತೆ ಚರ್ಚೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ನಾವು ಕೂಡ ಸರ್ವಪಕ್ಷ ಸಭೆ ನಡೆಸುವ ಬಗ್ಗೆ ಆಲೋಚನೆ ಮಾಡಿದ್ದೇವೆ ಎಂದು ತಿಳಿಸಿದರು.
Laxmi News 24×7