ದಾವಣಗೆರೆ: ನಮ್ಮ ಸರ್ಕಾರದ ತಪ್ಪು ನಿರ್ಧಾರಗಳಿಂದ ನಾವು ಸೋತಿದ್ದೇವೆ, ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸ ಬಾರದಿತ್ತು.
ಜಗದೀಶ್ ಶೆಟ್ಟರ್, ಕೆ ಎಸ್ ಈಶ್ವರಪ್ಪ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡಬೇಕಿತ್ತು. ಈ ತಪ್ಪು ನಿರ್ಧಾರದಿಂದ ನಮಗೆ ಸೋಲಾಗಿದೆ ಎಂದು ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಚುನಾವಣೆಯಲ್ಲಿ ಪಕ್ಷ ತೆಗೆದುಕೊಂಡ ತಪ್ಪು ನಿರ್ಧಾರಗಳ ಬಗ್ಗೆ ಧ್ವನಿ ಎತ್ತಿದ್ದಾರೆ.
ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರಕ್ಕೆ ಒಳಮೀಸಲಾತಿಗೆ ಕೈ ಹಾಕಬೇಡಿ ಎಂದು ಹೇಳಿದರೂ ಕೇಳಲಿಲ್ಲ. ಮೀಸಲಾತಿ ಗೊಂದಲದ ನಿರ್ಣಯಗಳೇ ಸೋಲಿಗೆ ಮುಳುವಾಗಿವೆ. 10 ಕೆಜಿ ಅಕ್ಕಿ ನೀಡುವುದು ಬಿಟ್ಟು, ಕಡಿತ ಮಾಡಿ ಬಡ ಜನರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿದರು ಎಂದರು.
ಸಿಎಂಗೆ ಎನ್ ಪಿ ಎಸ್ ನೌಕರರ ಮನವಿಯನ್ನು ಸ್ವೀಕರಿಸಿ ಎಂದು ಹೇಳಿದರು ಮಾಡಲಿಲ್ಲ. ರಾಜ್ಯದ ಅಧ್ಯಕ್ಷರು ಗೊಂದಲದ ಹೇಳಿಕೆ ನೀಡುತ್ತ ಬಂದಿದ್ದು, ಒಮ್ಮೆ ರಾಜೀನಾಮೆ ನೀಡುತ್ತೇನೆ, ಮತ್ತೊಮ್ಮೆ ನೀಡೋದಿಲ್ಲ ಅಂತ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಪ್ರಣಾಳಿಕೆ ಸಮಿತಿಗೆ ಡಾ. ಸುಧಾಕರ್ ನ ತಂದು ಕೂರಿಸಿದ್ರು, ಕೆಲಸಕ್ಕೆ ಬಾರದ ಪ್ರಣಾಳಿಕೆ ಮಾಡಿದ್ದಾರೆ ಎಂದು ಪರೋಕ್ಷವಾಗಿ ಸ್ವಪಕ್ಷದ ವಿರುದ್ಧ ರೇಣುಕಾಚಾರ್ಯ ಅಕ್ರೋಶ ಹೊರಹಾಕಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಸಮರ್ಥ: ರೇಣುಕಾಚಾರ್ಯ ಒಬ್ಬನಿಗೆ ಅಲ್ಲ, ರಾಜ್ಯದ ಎಲ್ಲಾ ಕಾರ್ಯಕರ್ತರಿಗೆ ಸೋಲಿನಿಂದ ನೋವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನೂ ಸಮರ್ಥನಿದ್ದೇನೆ, ಶಾಸಕನಾಗಿ ಸಚಿವನಾಗಿ ಅನುಭವ ಇದೆ. ಅದರೆ ಒತ್ತಡ ಮಾಡೋದಿಲ್ಲ. ಸೋಮಣ್ಣ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಕೇಳಿದ್ದು ನನಗೆ ಗೊತ್ತಿಲ್ಲ ಎಂದರು.
ಜಿಲ್ಲೆಯ ಎಲ್ಲ ಕಡೆ ನನಗೆ ಎಂ ಪಿ ಚುನಾವಣೆಗೆ ಸ್ಪರ್ಧೆ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಅದ್ದರಿಂದ ಒತ್ತಡ ಹೆಚ್ಚಾದ ಕಾರಣ ನಾನು ಕೂಡ ಪ್ರಬಲ ಅಕಾಂಕ್ಷಿಯಾಗಿದ್ದೇನೆ. ಯಡಿಯೂರಪ್ಪನವರು ಕೂಡ ಜಿಎಂ ಸಿದ್ದೇಶ್ವರ್ ಅವರನ್ನು ಎಂಪಿ ಟಿಕೆಟ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ, ನಾನು ಕೂಡ ಎಂಪಿ ಚುನಾವಣೆಯ ಪ್ರಬಲ ಅಕಾಂಕ್ಷಿ ಎಂದು ರೇಣುಕಾಚಾರ್ಯ ಹೇಳಿದ್ರು.