ಹುಬ್ಬಳ್ಳಿ: ಕಲಬುರಗಿಯಲ್ಲಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸಲೀಂ ಬಳ್ಳಾರಿಯನ್ನು ಹುಬ್ಬಳ್ಳಿ ನೇಕಾರ ನಗರದ ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರ ಕೈಗೆ ಸಿಕ್ಕಾಗಲೂ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಸಲೀಂ ಬಳ್ಳಾರಿಯನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಲಬುರಗಿಯಲ್ಲಿ ಕೊಲೆ ಮಾಡಿರುವ ಸಲೀಂ ಬಳ್ಳಾರಿ ತಲೆಮರೆಸಿಕೊಂಡಿದ್ದು, ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಲಬುರಗಿ ಪೊಲೀಸರು ಹುಡುಕುವುದನ್ನು ಸ್ಥಗಿತಗೊಳಿಸಿದ್ದರು. ಈತ ಅನೇಕ ಪ್ರಕರಣಗಳಲ್ಲಿ ಬೇಕಾಗಿರುವ ವ್ಯಕ್ತಿಯಾಗಿದ್ದ.

ಕಲಬುರಗಿಯಲ್ಲಿ ಸುಪಾರಿ ಪಡೆದು ಕೊಲೆ ಮಾಡಿರುವ ಸಲೀಂ ಬಳ್ಳಾರಿ ಹುಬ್ಬಳ್ಳಿ ನೇಕಾರ ನಗರಕ್ಕೆ ಬಂದು ತಲೆಮರೆಸಿಕೊಂಡಿದ್ದ. ಅಲ್ಲದೇ ಇಲ್ಲಿ ಪರಿಚಯ ಮರೆಮಾಚಿ ಜೀವನ ನಡೆಸುತ್ತಿದ್ದ. ಆದರೆ ನಿನ್ನೆ ಸಲೀಂ ಸಾವಜಿ ಹೊಟೇಲ್ ಗೆ ಊಟಕ್ಕೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಊಟ ಇಲ್ಲ ಎಂದು ಹೋಟೆಲ್ ಅವರು ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಸಲೀಂ ಸಾರ್ವಜನಿಕವಾಗಿ ಉಗುಳಿದ್ದಾನೆ.

ಇದನ್ನು ಕಂಡು ಆಕ್ರೋಶಗೊಂಡ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿದ್ದಾರೆ. ಇದೇ ವೇಳೆ ವಿದ್ಯುತ್ ಕಂಬಕ್ಕೆ ಗುದ್ದಿ ಸಲೀಂ ತಲೆಗೆ ಗಾಯ ಮಾಡಿದ್ದಾನೆ. ಆಗ ಸ್ಥಳೀಯರು ಕಸಬಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಇತನನ್ನು ಸಲೀಂ ಬಳ್ಳಾರಿ ಎಂದು ಕಂಡು ಹಿಡಿದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ವಶಕ್ಕೆ ಪಡೆದಿದ್ದಾರೆ.
Laxmi News 24×7