Breaking News

ಸುವರ್ಣ ವಿಧಾನಸೌಧಕ್ಕೆ ಕಚೇರಿಗಳ ಸ್ಥಳಾಂತರ: ಹೊಸ ಸರ್ಕಾರದತ್ತ ನಿರೀಕ್ಷೆಯ ನೋಟ

Spread the love

ಬೆಳಗಾವಿ: ದಶಕದ ಹಿಂದೆ ಉದ್ಘಾಟನೆಯಾದ ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಬೆಂಗಳೂರಿನಲ್ಲಿರುವ ಪ್ರಮುಖ ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರ ವಿಚಾರವಾಗಿ, ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯಾವ ನಿಲುವು ತಳೆಯಲಿದೆ ಎಂಬ ಜಿಜ್ಞಾಸೆ ಈಗ ಗಡಿಭಾಗದ ಕನ್ನಡಿಗರಲ್ಲಿ ಉಂಟಾಗಿದೆ.

 

2013ರಲ್ಲಿ ಅಧಿಕಾರಕ್ಕೇರಿದ್ದ ಕಾಂಗ್ರೆಸ್‌ ಸರ್ಕಾರದಲ್ಲಿ ಸಿದ್ದರಾಮಯ್ಯ ಐದು ವರ್ಷಗಳ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿದ್ದರು. ಆದರೆ, ಸೌಧಕ್ಕೆ ಕಚೇರಿಗಳ ಸ್ಥಳಾಂತರಕ್ಕೆ ಸಕಾರಾತ್ಮಕ ನಿಲುವು ತಳೆಯಲಿಲ್ಲ ಎಂಬುದು ಗಡಿ ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಅವರನ್ನು ಐದು ಬಾರಿ ಭೇಟಿಯಾಗಿದ್ದ ಜಿಲ್ಲೆಯ ಕನ್ನಡ ಸಂಘಟನೆಗಳ ಪ್ರಮುಖರ ನಿಯೋಗ ಸ್ಪಷ್ಟ ಭರವಸೆಯೂ ಸಿಗದೆ, ಬರಿಗೈಯಲ್ಲಿ ವಾಪಸ್ಸಾಗಿತ್ತು.

ಮಠಾಧೀಶರು, ವಿವಿಧ ಸಂಘಟನೆಗಳ ಮುಖಂಡರ ಒತ್ತಾಸೆ ತೀವ್ರಗೊಂಡಾಗ, ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನು ಕಾಂಗ್ರೆಸ್‌ ಸರ್ಕಾರ ರಚಿಸಿತ್ತು. ಕಚೇರಿ ಸ್ಥಳಾಂತರದ ಬಗ್ಗೆ ವರದಿ ನೀಡುವಂತೆ ತಿಳಿಸಿತ್ತು. ಬೆಳಗಾವಿಗೆ ಬಂದು ಪರಿಶೀಲನೆ ನಡೆಸಿದ ಸಮಿತಿ, ‘ಕಚೇರಿಗಳ ಸ್ಥಳಾಂತರ ಕಾರ್ಯಸಾಧುವಲ್ಲ’ ಎಂದು ವರದಿ ಕೊಟ್ಟಿತ್ತು. ಇದನ್ನೇ ನೆಪವಾಗಿಟ್ಟುಕೊಂಡ ಅಂದಿನ ಸರ್ಕಾರ ಸ್ಥಳಾಂತರ ವಿಚಾರವನ್ನೇ ಕೈಬಿಟ್ಟಿತ್ತು.

ಅಂದು ವಿರೋಧ ಪಕ್ಷದಲ್ಲಿದ್ದ ಬಿ.ಎಸ್‌.ಯಡಿಯೂರಪ್ಪ, ‘ನಾವು ಅಧಿಕಾರಕ್ಕೆ ಬಂದ 24 ತಾಸಿನೊಳಗೆ ಸುವರ್ಣಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರಿಸುತ್ತೇವೆ’ ಎಂದು ಆಶ್ವಾಸನೆ ಕೊಟ್ಟಿದ್ದರು. 2018ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಆಗ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ, ದಕ್ಷಿಣ ಕರ್ನಾಟಕದಲ್ಲಿದ್ದ 9 ಪ್ರಮುಖ ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವ ಆದೇಶ ಹೊರಡಿಸಿದರು. ಆ ಪೈಕಿ ಒಂದು ಕಚೇರಿ(ಮಾಹಿತಿ ಹಕ್ಕು ಆಯುಕ್ತರು) ಮಾತ್ರ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರವಾಗಿದೆ. ನಂತರ ಅಧಿಕಾರಕ್ಕೆ ಬಂದ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಗಳು ಕಚೇರಿ ಸ್ಥಳಾಂತರ ವಿಚಾರವಾಗಿ ಯಾವುದೇ ದೃಢ ನಿಲುವು ತೆಗೆದುಕೊಳ್ಳಲಿಲ್ಲ.

ಈಗ 2023ರಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ, ಕಚೇರಿ ಸ್ಥಳಾಂತರ ವಿಷಯವಾಗಿ ಬೇಡಿಕೆ ಈಡೇರಿಸಬಹುದು ಎನ್ನುವ ನಿರೀಕ್ಷೆ ಈ ಭಾಗದ ಜನರಲ್ಲಿ ಗರಿಗೆದರಿದೆ. ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಗಡಿ ಸಂರಕ್ಷಣಾ ಆಯೋಗ, ನೀರಾವರಿ, ಸಹಕಾರ ಮತ್ತಿತರ ಇಲಾಖೆಗಳ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಬೇಕೆನ್ನುವ ಬೇಡಿಕೆಯಿದೆ.

‘ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕದ 50 ಸ್ಥಾನಗಳ ಪೈಕಿ 33 ಹಾಗೂ ಕಲ್ಯಾಣ ಕರ್ನಾಟಕದ 41 ಸ್ಥಾನಗಳ ಪೈಕಿ 26 ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದಿದೆ. ಆ ಪಕ್ಷಕ್ಕೆ ಇಲ್ಲಿನ ಮತದಾರರು ಕೊಟ್ಟ ಕೊಡುಗೆ ಗಮನಿಸಿ, ನೂತನ ಮುಖ್ಯಮಂತ್ರಿಗಳು ಕಚೇರಿಗಳನ್ನು ಸ್ಥಳಾಂತರಿಸುತ್ತಾರೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ.

-ಅಶೋಕ ಚಂದರಗಿ, ಅಧ್ಯಕ್ಷ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶೀಘ್ರದಲ್ಲೇ ಭೇಟಿಯಾಗಿ ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರಿಸುವ ಬಗ್ಗೆ ಚರ್ಚಿಸುತ್ತೇವೆ- ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಗದಗ-ಡಂಬಳಪ್ರತಿವರ್ಷ ಅಧಿವೇಶನದಲ್ಲಿ 10 ದಿನ ಮಾತ್ರ ಸೌಧ ಪೂರ್ಣಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಇದು ಸದಾ ಕ್ರಿಯಾಶೀಲವಾಗಿರಲು ವಿವಿಧ ಇಲಾಖೆಗಳ ರಾಜ್ಯಮಟ್ಟದ ಕಚೇರಿಗಳು ಸ್ಥಳಾಂತರವಾಗಬೇಕು. ಹೊಸ ಸರ್ಕಾರ ಈ ದಿಸೆಯಲ್ಲಿ ಗಮನ ಹರಿಸಬೇಕು.Cut-off box – ಬೆಳಗಾವಿಯಲ್ಲಿ ಆಡಳಿತ ಸೌಧ ಕಟ್ಟಲಿ: ‘ಬೆಳಗಾವಿ ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿದ್ದ ಜಿಲ್ಲಾಮಟ್ಟದ 23 ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಸೌಧದ ಘನತೆಗೆ ಧಕ್ಕೆ ಬಂದಿದ್ದು ವಿವಿಧ ಕೆಲಸಗಳಿಗೆ ಜನರು ಅಲ್ಲಿಗೆ ಹೋಗಲು ತೊಂದರೆ ಅನುಭವಿಸುವಂತಾಗಿದೆ. ಹಾಗಾಗಿ ಬೆಳಗಾವಿಯಲ್ಲಿ ಆಡಳಿತ ಸೌಧ ಕಟ್ಟಬೇಕು. ಸುವರ್ಣ ವಿಧಾನಸೌಧದಲ್ಲಿರುವ ಜಿಲ್ಲಾಮಟ್ಟದ ಕಚೇರಿಗಳನ್ನು ಅಲ್ಲಿಗೆ ಸ್ಥಳಾಂತರಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಒತ್ತಾಯಿಸಿದರು


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ