ಜೈಪುರ; ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಹೋದರ ಅಗ್ರಸೇನ್ ಗೆಹ್ಲೋಟ್ ಅವರ ಜೋಧ್‌ಪುರ ನಿವಾಸದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಳಿ ನಡೆಸಿದೆ. ರಸಗೊಬ್ಬರ ವ್ಯಾಪಾರಿಯಾಗಿರುವ ಅಗ್ರಸೇನ್ ಅವರನ್ನು ರಸಗೊಬ್ಬರ ಹಗರಣದಲ್ಲಿ ಈ ಹಿಂದೆ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿತ್ತು.
ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಪವನ್ ಖೇರಾ ಅವರು ಪ್ರಧಾನಿ ಮತ್ತು ಬಿಜೆಪಿ ನಾಯಕ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
2007 ಮತ್ತು 2009 ರ ನಡುವೆ, ಅಗ್ರಸೇನ್ ಗೆಹ್ಲೋಟ್ ಅವರ ಸಂಸ್ಥೆ ಅನುಪಮ್ ಕೃಷಿ ಭಾರತೀಯ ರೈತರು ಬಳಸುತ್ತಿದ್ದ ದೊಡ್ಡ ಪ್ರಮಾಣದ ಮ್ಯೂರಿಯೇಟ್ ಆಫ್ ಪೊಟಾಷ್ (MoP) ಅನ್ನು ಸಬ್ಸಿಡಿ ದರದಲ್ಲಿ ವಿದೇಶಗಳಿಗೆ ರಫ್ತು ಮಾಡಿತ್ತು. ಸಂಸ್ಥೆಯು ಅದನ್ನು ಇತರ ಹಲವರಿಗೆ ಮಾರಾಟ ಮಾಡಿತ್ತು ಎಂದು ಆರೋಪಿಸಲಾಗಿದೆ, ಅವರು ಅದನ್ನು ಮಲೇಷ್ಯಾ ಮತ್ತು ಸಿಂಗಾಪುರಕ್ಕೆ ‘ಕೈಗಾರಿಕಾ ಉಪ್ಪು’ ಹೆಸರಿನಲ್ಲಿ ರಫ್ತು ಮಾಡಿದ್ದರು.
ರೈತರಿಗೆ ವಿತರಿಸಲು ತನ್ನಿಂದ ರಸಗೊಬ್ಬರ ಖರೀದಿಸಿದ ಹಲವಾರು ಮಧ್ಯವರ್ತಿಗಳು ಅದನ್ನು ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ ಎಂದು ಅಗ್ರಸೇನ್ ಆರೋಪಿಸಿದ್ದರು.
ಈ ಕುರಿತು ಅಶೋಕ್ ಗೆಹ್ಲೋಟ್, ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಆಡಳಿತಾರೂಢ ಕೇಸರಿ ಪಕ್ಷವಾದ ಬಿಜೆಪಿ ರಾಜಸ್ಥಾನದಲ್ಲಿ ತಮ್ಮ ಸರ್ಕಾರವನ್ನು ಬೀಳಿಸಲು ಪಿತೂರಿ ನಡೆಸಿದೆ ಎಂದು ಆರೋಪಿಸಿದ್ದಾರೆ. ರಾಜಸ್ಥಾನದಲ್ಲಿ ನನ್ನ ಸರ್ಕಾರವನ್ನು ಬೀಳಿಸಲು ಪಿತೂರಿಯಾಗಿದೆ ಎಂದು ಅವರು ಹೇಳಿದ್ದಾರೆ.