ಬೆಂಗಳೂರು: ಯೋಗರಾಜ್ ಭಟ್ಟರು ತಮ್ಮ ವಿಭಿನ್ನ ಸಾಹಿತ್ಯ, ನಿರ್ದೇಶನದ ಮೂಲಕವೇ ಪ್ರಸಿದ್ಧರು. ಅವರ ಸಾಹಿತ್ಯ ಯುವ ಸಮೂಹಕ್ಕೆ ಅಪ್ಯಾಯಮಾನ. ಹಲವು ವಿಶಿಷ್ಠ ಗೀತೆಗಳ ಮೂಲಕ ಯುವ ಸಮೂಹಕ್ಕೆ ಭಟ್ಟರು ಹುಚ್ಚು ಹಿಡಿಸುತ್ತಾರೆ. ಅದೇ ರೀತಿ ಇದೀಗ ಕೊರೊನಾ ಜಾಗೃತಿ ಗೀತೆಯನ್ನು ಕಟ್ಟಿಕೊಟ್ಟಿದ್ದಾರೆ.
ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಕುರಿತು ಈಗಾಗಲೇ ಹಲವು ಗಾಯಕರು ಹಾಗೂ ಬರಹಗಾರರು ಹಾಡು ರಚಿಸಿದ್ದು, ಇದೀಗ ಯೋಗರಾಜ್ ಭಟ್ಟರು ಹಾಡು ರಚಿಸಿದ್ದಾರೆ. ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಪೊಲೀಸ್ ಸಹಯೋಗದಲ್ಲಿ ಈ ಜಾಗೃತಿ ಗೀತೆ ರಚಿಸಿದ್ದು, ಕೊರೊನಾ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ. ಇದರ ಮಧ್ಯೆಯೇ ಕೊರೊನಾ ವಾರಿಯರ್ಸ್ ಗೆ ಸೆಲ್ಯೂಟ್ ಮಾಡಿದ್ದಾರೆ.
ಹಾಡು ಆರಂಭವಾಗುತ್ತಿದ್ದಂತೆ ಹೃದಯ ಬಡಿತದ ಶಬ್ದ ಕೇಳಿಸುತ್ತದೆ. ಇದರ ನಡುವೆಯೇ ವಿಧಾನಸೌಧ, ಬೆಂಗಳೂರು ಪೊಲೀಸ್, ವೈದ್ಯರು ಪೌರ ಕಾರ್ಮಿಕರು, ಮಾಧ್ಯಮದವರನ್ನು ತೋರಿಸಿದ್ದಾರೆ. ಅಷ್ಟರಲ್ಲೇ ಊರಿಗೂರೆ ಖಾಲಿ, ದಾರಿ ತುಂಬಾ ಬೇಲಿ….ತಿಳಿದುಕೊಳ್ಳುವ ಬನ್ನಿ ಬಾನ ಬಣ್ಣ ನೀಲಿ, ತಿರುಗುತಿರುವ ಭೂಮಿ ಇಂದು ನಿಲ್ಲಬಹುದೇ ಜ್ವರವು ಬಂದು ಎಂಬ ವಿಜಯ್ ಪ್ರಕಾಶ್ ಧ್ವನಿ ಕೇಳುತ್ತದೆ. ನಂತರ ಯಾರು ನೀನು ಮಾನವ, ಕೇಳುತಿಹುದು ಕೊರೊನಾ ಎಂದು ಹಾಡು ಮುಂದುವರಿಯುತ್ತದೆ.
ಇದರಲ್ಲೇ ಸಿಎಂ, ಸುಧಾಮೂರ್ತಿ, ಸಚಿವ ಶ್ರೀರಾಮುಲು ಅವರನ್ನು ತೋರಿಸಲಾಗಿದೆ. ಅಲ್ಲದೆ ರೋಗ ಕೇಳುತ ಬರುವುದೇ ಮನುಜನಾ ಕುಲ ಗೋತ್ರವಾ, ಸಾವು ನೋಡುತ ನಗುತಿದೆ ಬ್ಯಾಂಕ್ ಅಕೌಂಟಿನ ಗಾತ್ರವ ಎಂಬ ಸಾಲುಗಳು ಸೆಳೆಯುತ್ತವೆ. ವಿಜಯ್ ಪ್ರಕಾಶ್ ಧ್ವನಿಯಲ್ಲಿ ಈ ಜಾಗೃತಿ ಗೀತೆ ಅದ್ಭುತವಾಗಿ ಮೂಡಿ ಬಂದಿದೆ
ಈ ಹಾಡನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಬಿಡುಗಡೆಗೊಳಿಸಿದರು. ಈ ವೇಳೆ ಯೋಗರಾಜ್ ಭಟ್, ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ಉಪಸ್ಥಿತರಿದ್ದರು.
ಯೋಗರಾಜ್ ಭಟ್ಟರೇ ಸಾಹಿತ್ಯ ಬರೆದು ಹಾಡು ರಚಿಸಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಜಯ್ ಪ್ರಕಾಶ್ ಹಾಡಿದ್ದಾರೆ. ಈ ಹಾಡು ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.