ಬೆಳಗಾವಿ: ಆರ್ಧಕ್ಕೆ ನಿಂತ 7 ಏತನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ಹಾಗೂ 8 ಶ್ರಮಿಕ ವಸತಿ ಶಾಲೆಗಳನ್ನು ನಿರ್ಮಿವುಸುವುದು; ಈ ಬಾರಿ ರಾಜ್ಯ ಬಜೆಟ್‌ನಲ್ಲಿ ಬೆಳಗಾವಿ ಜಿಲ್ಲೆಗೆ ಸಿಕ್ಕ ಮಹತ್ವದ ಕೊಡುಗೆಗಳು.
ಸವದತ್ತಿ ತಾಲ್ಲೂಕಿನ ಚಚಡಿ, ಮುರಗೋಡ, ಗೋಕಾಕ ತಾಲ್ಲೂಕಿನ ಗೊಡಚಿನಮಲ್ಕಿ, ಅಥಣಿ ತಾಲ್ಲೂಕಿನ ಬಸವೇಶ್ವರ (ಕೆಂಪವಾಡ) ಏತ ನೀರಾವರಿ, ಗೋಕಾಕ ತಾಲ್ಲೂಕಿನ ಅಡವಿಸಿದ್ದೇಶ್ವರ ಏತ ನೀರಾವರಿ, ಶಂಕರಲಿಂಗ, ರಾಮದುರ್ಗ ತಾಲ್ಲೂಕಿನ ಸಾಲಾಪುರ ಏತ ನೀರಾವರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಈ ಎಲ್ಲ ಯೋಜನೆಗಳಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಘೋಷಣೆ ಮಾಡಲಾಗಿತ್ತು. ಕೆಲವು ಅನುಮೋದನೆ ಹಂತದಲ್ಲಿದ್ದರೆ, ಮತ್ತೆ ಕೆಲವರು ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಒಣ ಸೀಮೆ ಹೊಂದಿರುವ ಈ ಭಾಗದ ಜನರ ಬಹು ದಶಕಗಳ ಬೇಡಿಕೆ ಇದರೊಂದಿಗೆ ಈಡೇರಿದಂತಾಗಿದೆ.
ಅಲ್ಲದೇ, ಕೃಷ್ಣಾ, ಕಾವೇರಿ, ಗೋದಾವರಿ ಹಾಗೂ ಇತರೆ ನದಿ ಕಣಿವೆಗಳಲ್ಲಿ ಒಟ್ಟಾರೆ ₹8,045 ಕೋಟಿ ಮೊತ್ತದ 75
ನೀರಾವರಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವುದಾಗಿ ಘೋಷಿಸಲಾಗಿದೆ. ಇದರಲ್ಲಿ ಕೃಷ್ಣಾ ಹಾಗೂ ಮಲಪ್ರಭಾ ಕಣಿವೆಗಳಲ್ಲಿ ಬರುವ ನವಿಲುತೀರ್ಥ ಅಣೆಕಟ್ಟಿನ ಕೆಳಭಾಗದಲ್ಲಿ ಮಲಪ್ರಭಾ ನದಿಗೆ ಅಕ್ವೆಡಕ್ಟ್ ನಿರ್ಮಾಣ, ರಾಮದುರ್ಗ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ತುಂಬಿಸುವ ಯೋಜನೆ, ಗೊಣ್ಣಾಗರ ಗ್ರಾಮದ ಹತ್ತಿರ ಮಲಪ್ರಭಾ ನದಿಯಿಂದ ಕೊರೆದ ಭಾಗಕ್ಕೆ ತಡೆಗೋಡೆ ನಿರ್ಮಾಣ, ಯರಗಟ್ಟಿ ಏತ ನೀರಾವರಿ ಯೋಜನೆ, ರೇಣುಕಾ ಏತ ನೀರಾವರಿ ಯೋಜನೆ, ಖಾನಾಪುರ ತಾಲ್ಲೂಕಿನ ಚಿಕ್ಕಹಟ್ಟಿಹೊಳಿ ಗ್ರಾಮದ ಸಮೀಪ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿದೆ.
ರಾಯಬಾಗ ತಾಲ್ಲೂಕಿನ ಕುಡಚಿ ಕೆರೆ ತುಂಬಿಸುವ ಯೋಜನೆ ಹಾಗೂ ರಾಮದುರ್ಗ ತಾಲ್ಲೂಕಿನ ಕೆರೆಗಳ ಭರ್ತಿ ಮಾಡುವುದು, ರಾಮದುರ್ಗ ತಾಲ್ಲೂಕಿನ ಗೊಣ್ಣಾಗರ ಗ್ರಾಮದ ಹತ್ತಿರ ಮಲಪ್ರಭಾ ನದಿಯಿಂದ ಕೊರೆದ ಭಾಗಕ್ಕೆ ತಡೆಗೋಡೆ ನಿರ್ಮಾಣ ಮಾಡುವುದಾಗಿ ತಿಳಿಸಿದ್ದರೂ ಇದಕ್ಕೆ ಅನುದಾನ ಸ್ಪಷ್ಟಪಡಿಸಿಲ್ಲ.
ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಆದ್ಯತೆ:
ಅಥಣಿ, ರಾಮದುರ್ಗ, ಯಮಕನಮರಡಿ, ಬೈಲಹೊಂಗಲ, ಕಾಗವಾಡ, ಸವದತ್ತಿ, ಚಿಕ್ಕೋಡಿ-ಸದಲಗ, ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿ ಶ್ರಮಿಕ ವಸತಿ ಶಾಲೆ ಆರಂಭಿಸುವ ಬಗ್ಗೆಯೂ ಇಲಾಖೆಯಿಂದ ಅನುಮೋದನೆ ಕೊಡಲಾಗಿದೆ. ಈ ಕ್ಷೇತ್ರಗಲ್ಲಿ ದುಡಿಯುವ ವರ್ಗದ ಜನಸಂಖ್ಯೆ ಹೆಚ್ಚಿರುವ ಕಾರಣ ಈ ಶ್ರಮಿಕ ವಸತಿ ಶಾಲೆಗಳು ಹೆಚ್ಚು ಅನುಕೂಲವಾಗಲಿವೆ.
ಡಾ.ಬಿ.ಆರ್. ಅಂಬೇಡ್ಕರ್ ಅವರು ಭೇಟಿ ನೀಡಿದ ಸ್ಥಳಗಳಲ್ಲಿ ಸಿಬಿಎಸ್‌ಇ ಪಠ್ಯಕ್ರಮದ ನಾಲ್ಕು ‘ಕ್ರೈಸ್’ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಲಾಗಿದ್ದು, ಇದರಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಕೂಡ ಸೇರಿದೆ. ನೂರು ವರ್ಷಗಳ ಹಿಂದೆ ಅಂಬೇಡ್ಕರ್ ಅವರು ಪ್ರಕರಣವೊಂದರ ಕುರಿತು ವಾದಿಸಲು ಚಿಕ್ಕೋಡಿ ನ್ಯಾಯಾಲಯಕ್ಕೆ ಬಂದಿದ್ದರು.
ಸರ್ಕಾರಿ ಪ್ರಥಮದರ್ಜೆ ಕಾಲೇಜು ಸ್ಥಾಪನೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗಸ್ಥ ಮಹಿಳೆಯರಿಗೆ ತಲಾ 50 ಸಂಖ್ಯಾಬಲದ ಎರಡು ವಸತಿ ನಿಲಯ ನಿರ್ಮಾಣ, ಬೆಳಗುಂದಿಯಲ್ಲಿ ನೂತನ ಕುಸ್ತಿ ಅಖಾಡ ನಿರ್ಮಾಣ ಇವು ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಸಿಕ್ಕ ಪ್ರಮುಖ ಕೊಡುಗೆಗಳು.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ 150 ಸಂಖ್ಯಾಬಲದ 50 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಲಾಗಿದೆ. ಇದರಲ್ಲಿ ಬೆಳಗಾವಿಯ ಹೆಸರೂ ಇದ್ದು, ಎಷ್ಟು ವಸತಿನಿಲಯಗಳು ಎಂದು ಸ್ಪಷ್ಟವಾಗಿಲ್ಲ. ರಾಜ್ಯದ ಎರಡನೇ ಅತಿ ದೊಡ್ಡ ಜಿಲ್ಲೆಯಾದ ಬೆಳಗಾವಿಯಲ್ಲಿ ಇನ್ನೂ 15 ವಸತಿ ನಿಲಯಗಳ ಬೇಡಿಕೆ ಇದೆ.
ಬೈಲಹೊಂಗಲದಲ್ಲಿ ʻಪ್ರಜಾಸೌಧʼ ನಿರ್ಮಾಣ, ಹೊಸದಾಗಿ ತಾಲ್ಲೂಕು ಕೇಂದ್ರವಾದ ಯರಗಟ್ಟಿಯಲ್ಲಿ ಪೊಲೀಸ್ ಠಾಣೆ ನಿರ್ಮಾಣ, ಧಾರವಾಡ- ಕಿತ್ತೂರು- ಬೆಳಗಾವಿ ರೈಲು ಮಾರ್ಗಕ್ಕಾಗಿ ಮೂಲ ಸೌಕರ್ಯ ಅಭಿವೃದ್ಧಿ; ಹಳೆಯ ಬೇಡಿಕೆಗಳನ್ನು ಈಡೇರಿಸಲಾಗಿದೆ.
Laxmi News 24×7