ಕಲಬುರಗಿ: ಕೇಂದ್ರ ಬಜೆಟ್ ಭವಿಷ್ಯಕ್ಕೆ ಪೂರಕವಾಗಿದ್ದು, ವಿಕಸಿತ ಭಾರತದ ಗುರಿ ಹೊಂದಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ವಿವಿಯಲ್ಲಿ ವ್ಯವಹಾರ ಅಧ್ಯಯನ ನಿಕಾಯ ಸೋಮವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ವ್ಯವಹಾರ ಅಧ್ಯಯನ ವಿದ್ಯಾರ್ಥಿಗಳಿಗೆ ಬಜೆಟ್ ಚರ್ಚೆ ತುಂಬ ಪ್ರಮುಖ ವಿಷಯ. ಬಜೆಟ್, ಭಾರತೀಯ ಆರ್ಥಿಕತೆ ಮತ್ತು ವ್ಯವಹಾರದ ಮೇಲೆ ಅದರ ಪ್ರಭಾವ ವಿಶ್ಲೇಷಿಸಬೇಕು. ಈಗ ಭಾರತ ವಿಶ್ವದಲ್ಲಿ ಅತ್ಯಂತ ಬಲಿಷ್ಠ ಆರ್ಥಿಕತೆಯಾಗಿದೆ. ಈ ಸಂದರ್ಭದಲ್ಲಿ ನೀವಿರುವುದರಿಂದ ತುಂಬ ಅದೃಷ್ಟಶಾಲಿಗಳು. ನಮ್ಮ ಪೀಳಿಗೆಗಿಂತ ನಿಮಗೆ ಹೆಚ್ಚಿನ ಅವಕಾಶಗಳಿವೆ. ದೇಶದ ಪ್ರತಿಯೊಬ್ಬ ನಾಗರಿಕ ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಕೆಲಸ ಮಾಡುವ ಜವಾಬ್ದಾರಿ ಹೊಂದಿದ್ದಾನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ್ ಮಾತನಾಡಿ, 2026ರ ಕೇಂದ್ರ ಬಜೆಟ್ ಮೂರು ಕರ್ತವ್ಯಗಳ ಮೇಲೆ ಕೇಂದ್ರೀಕರಿಸಿದೆ. ಇದು ಯುವಜನರು, ಮಹಿಳೆಯರು, ಅಂಚಿನಲ್ಲಿರುವ ಗುಂಪು ಮತ್ತು ರೈತರ ಆರ್ಥಿಕ ಬೆಳವಣಿಗೆ ವೇಗಗೊಳಿಸಲು ನೆರವಾಗಲಿದೆ ಎಂದು ತಿಳಿಸಿದರು.
ಬಜೆಟ್ ಹೆಚ್ಚಿನ ಮೌಲ್ಯದ ನಗದು ಬೆಳೆ ಬೆಳೆಸಲು ಕೃಷಿ ವೈವಿಧ್ಯೀಕರಣ, ತಂತ್ರಜ್ಞಾನ ಬಳಕೆ ಮತ್ತು ರೈತರ ಆದಾಯ ಹೆಚ್ಚಿಸಲು ಪಶುಸಂಗೋಪನೆ ಮತ್ತು ಮೀನುಗಾರಿಕೆ ಅಭಿವೃದ್ಧಿ ಮೇಲೆ ಕೇಂದ್ರೀಕರಿಸಿದೆ. ಏಳು ಹೈಸ್ಪೀಡ್ ರೈಲ್ವೆ ಕಾರಿಡಾರ್, ಶಿಕ್ಷಣ ಮತ್ತು ಕೌಶಲ, ಆರೋಗ್ಯ ಮತ್ತು ವೈದ್ಯಕಿಯ ಪ್ರವಾಸೋದ್ಯಮ ಮೂಲಕ ಮೂಲಸೌಕರ್ಯ ಅಭಿವೃದ್ಧಿ ಮೂಲಕ ವಿಕಸಿತ ಭಾರತ ಗುರಿ ಸಾಧಿಸಲು ಬಲವಾದ ಅಡಿಪಾಯ ಹಾಕಿದೆ ಎಂದರು.
ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಮಾತನಾಡಿ, ಬಜೆಟ್ ದೇಶ ಮತ್ತು ಅದರ ಭವಿಷ್ಯಕ್ಕೆ ಒಳ್ಳೆಯದಾಗಿದ್ದರೂ ಈ ಪ್ರದೇಶ ಕಡೆಗಣಿಸಲಾಗಿದೆ. ಕಲ್ಯಾಣ ಕರ್ನಾಟಕಕ್ಕಾಗಿ ನಾವು ವಿಶೇಷ ಪ್ಯಾಕೇಜ್ ಮತ್ತು ಯೋಜನೆಳನ್ನು ನಿರೀಕ್ಷಿಸಿದ್ದೆವು ಎಂದು ಹೇಳಿದರು.
ಡೀನ್ ಸ್ಕೂಲ್ ಆಫ್ ಬಿಜಿನೆಸ್ ಸ್ಟಡಿಸ್ ಪ್ರೊ.ಪಾಂಡುರಂಗ ಪತ್ತಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ದೇವರಾಜಪ್ಪ ಆದಾಯ ಮತ್ತು ಸಾರ್ವಜನಿಕ ವೆಚ್ಚ, ಡಾ.ಸುಷ್ಮಾ ಕೃಷಿಯ ಮೇಲಿನ ಪರಿಣಾಮ, ಡಾ.ಸಫಿಯಾ ಪರ್ವೀನ್ ಆರೋಗ್ಯ ಮತ್ತು ಶಿಕ್ಷಣದ ಉತ್ತೇಜನ, ಡಾ.ಗಣಪತಿ ಸಿನ್ನೂರ್ ಉತ್ಪಾದನಾ ವಲಯಕ್ಕೆ ಪ್ರೋತ್ಸಾಹ, ಡಾ.ಶೈಲಜಾ ಕೊನೆಕ್ ಸೇವಾ ವಲಯಕ್ಕೆ ಪ್ರೋತ್ಸಾಹದ ಬಗ್ಗೆ ಮಾತನಾಡಿದರು, ಡಾ.ಮಹೇಂದ್ರ ಪ್ರಯಾಣ ಮತ್ತು ಪ್ರವಾಸೋದ್ಯಮ ವಲಯದ ಬೆಳವಣಿಗೆಯ ಅವಕಾಶಗಳ ಬಗ್ಗೆ ಚರ್ಚಿಸಿದರು ಮತ್ತು ಡಾ.ಪಾಂಡುರಂಗ ಪತ್ತಿ ಭಾರತೀಯ ತೆರಿಗೆಯಲ್ಲಿನ ಬದಲಾವಣೆಗಳ ಬಗ್ಗೆ ಮಾತನಾಡಿದರು.
ಪ್ರೊ.ಶಿವಕುಮಾರ ದೀನೆ, ಡಾ.ಶಿವಕುಮಾರ ಬೆಳ್ಳಿ, ಡಾ.ನಿರಂಜನ ಪೂಜಾರ್, ಡಾ.ಸುಜಾತ, ಕೆಕೆಸಿಸಿಐ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ ಇತರರಿದ್ದರು. ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಎಂ. ಜೋಹೈರ್ ಸ್ವಾಗತಿಸಿದರು. ಸಚಿನ್ಸಿಂಗ್ ಶೇಖಾವತ್ ನಿರೂಪಣೆ ಮಾಡಿದರು. ಡಾ.ಸುಮಾ ಸ್ಕಾರಿಯಾ ವಂದಿಸಿದರು.
Laxmi News 24×7