ಉಡುಪಿ: ದುಬೈನಿಂದ ಬಂದ ಗರ್ಭಿಣಿಗೆ ಕೊರೊನಾ ಸೋಂಕಿನ ಸೋಂಕಿನ ಲಕ್ಷಣಗಳು ಇಲ್ಲ ಎಂದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ಗರ್ಭಿಣಿಯ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಉಡುಪಿ ಜಿಲ್ಲೆಯ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಮಾರ್ಚ್ 16ರಂದು ಗರ್ಭಿಣಿ ದಾಖಲಾಗಿದ್ದರು. ಆಕೆ ವಿಪರೀತ ಕಫದಿಂದ ನರಳಾಡುತ್ತಿದ್ದರು. ವಾರದ ಹಿಂದೆ ದುಬೈನಿಂದ ಬಂದಿರುವುದರಿಂದ ಗರ್ಭಿಣಿ ಮೇಲೆ ಸಂಶಯ ಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮಣಿಪಾಲ ಕೆಎಂಸಿಗೆ ಆಕೆಯನ್ನು ಅಡ್ಮಿಟ್ ಮಾಡಿದ್ದರು.
ಗರ್ಭಿಣಿಯ ಗಂಟಲಿನ ದ್ರವವನ್ನು ಶಿವಮೊಗ್ಗ ಸರ್ಕಾರಿ ಆಸ್ಪತ್ರೆಗೆ ಉಡುಪಿಯಿಂದ ರವಾನಿಸಲಾಗಿತ್ತು. ವೈದ್ಯಕೀಯ ವರದಿ ಉಡುಪಿ ಡಿಎಚ್‍ಒ ಕೈಸೇರಿದ್ದು, ಕೊರೊನ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲ ಎಂದು ಉಲ್ಲೇಖವಾಗಿದೆ. ಇಡೀ ಕರ್ನಾಟಕದಲ್ಲಿ ಇದು ಗಮನ ಸೆಳೆದ ಪ್ರಕರಣವಾಗಿದ್ದು ವೈದ್ಯಕೀಯ ವರದಿ ಕೈಸೇರಿದ ಕೂಡಲೇ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಕೆಎಂಸಿಯ ವೈದ್ಯರು ಮಹಿಳೆಯ ಕಫ ಮತ್ತು ಶೀತ ನಿವಾರಣೆಗಾಗಿ ಚಿಕಿತ್ಸೆಯನ್ನು ಕೊಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಮಹಿಳೆಯಲ್ಲಿ ಸೋಂಕಿನ ಲಕ್ಷಣ ಇದ್ದ ಕಾರಣ ಆಕೆಯನ್ನು 15 ದಿನ ನಿಗಾದಲ್ಲಿ ಇಡಲು ವೈದ್ಯರು ಸಲಹೆ ಕೊಟ್ಟಿದ್ದಾರೆ.