ನ್ಯೂಯಾರ್ಕ್/ವಾಷಿಂಗ್ಟನ್, ಮೇ 4-ಡೆಡ್ಲಿ ಕೊರೊನಾ ವೈರಸ್ ಹೆಮ್ಮಾರಿ ನಿಗ್ರಹಕ್ಕಾಗಿ ಈ ವರ್ಷಾಂತ್ಯದಲ್ಲಿ ನಮ್ಮಲ್ಲೇ ಅತ್ಯಂತ ಪರಿಣಾಮಕಾರಿ ಲಸಿಕೆ ಸಿದ್ದವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಕೋವಿಡ್-19 ವಿರುದ್ಧ ಔಷಧಿ ತಯಾರಿಸಲು ನಮ್ಮ ವೈದ್ಯರು ನಿರಂತರ ಪ್ರಯತ್ನದಲ್ಲಿದ್ದಾರೆ. ಈ ವರ್ಷಾಂತ್ಯದೊಳಗೆ ಆ ಲಸಿಕೆ ನಮ್ಮ ಕೈ ಸೇರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಫಾಕ್ಸ್ ಟಿವಿಗೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್, ಅಮೆರಿಕದಲ್ಲಿ ಕೊರೊನಾ ನಿಯಂತ್ರಣ ಔಷಧಿ ಸಿದ್ಧವಾಗುವುದಕ್ಕೆ ಮುನ್ನ ಬೇರೆ ಯಾವ ದೇಶಗಳು ಲಸಿಕೆ ಕಂಡುಹಿಡಿದರೂ ಅದು ಅತ್ಯಂತ ಸಂತೋಷದ ವಿಚಾರ. ಒಟ್ಟಿನಲ್ಲಿ ಮಾರಕ ವೈರಸ್ ನಿಗ್ರಹ ಈ ವಿಶ್ವದ ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದರು.
ಮೃತರ ಸಂಖ್ಯೆ 70,000 ಸನಿಹ ಕಿಲ್ಲರ್ ಕೊರೊನಾ ವೈರಸ್ ದಾಳಿಗೆ ಅಮೆರಿಕನ್ನರು ಸುಲಭ ತುತ್ತಾಗುತ್ತಿದ್ದು, ಮೃತರ ಸಂಖ್ಯೆ 70,000 ಸಮೀಪದಲ್ಲಿದೆ.. ಸೋಂಕಿತರ ಸಂಖ್ಯೆ 11.72 ಲಕ್ಷ .ಕಿಲ್ಲರ್ ಕೊರೊನಾ ವೈರಸ್ ದಾಳಿಯಿಂದ ಅಮೆರಿಕದಲ್ಲಿ ಈವರೆಗೆ ಮೃತರ ಸಂಖ್ಯೆ 69,000 ದಾಟಿದೆ.
ಪರಿಸ್ಥಿತಿ ಹೀಗೆ ಮುಂದುವರಿದರೆ ಇನ್ನೊಂದು ನಾಲ್ಕೈದು ದಿನಗಳಲ್ಲಿ ಅಮೆರಿಕದಲ್ಲಿ ಮರಣ ಪ್ರಮಾಣ ಒಂದು ಲಕ್ಷ ತಲುಪುವ ಭಾರೀ ಆತಂಕವಿದೆ.ಇಂದು ಕೂಡ ಅಮೆರಿಕದ ವಿವಿಧ ರಾಜ್ಯಗಳು ಮತ್ತು ಪ್ರಮುಖ ನಗರಗಳಲ್ಲಿ ಕೊರೊನಾ ಸಾವು ಮತ್ತು ಸೋಂಕು ಪ್ರಕರಣಗಳ ಸರಣಿ ಯಥಾಪ್ರಕಾರ ಮುಂದುವರಿದಿದೆ. ಅಮೆರಿಕದಲ್ಲಿ ಸುಮಾರು ಒಂದು ಲಕ್ಷ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.