ತುಮಕೂರು: ಮಹಾರಾಷ್ಟ್ರದಿಂದ ಜಿಲ್ಲೆಗೆ ಮೂವರು ಅಕ್ರಮವಾಗಿ ನುಸುಳಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಸರ್ಕಾರದ ಆದೇಶ ಮೀರಿ ಮೂರು ಜನ ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದ್ದಾರೆ. ಅಶೋಕ ಹೆಚ್.ಬಿ, ಮಲ್ಲಿಕಾರ್ಜುನ ಮತ್ತು ಚಂದ್ರಮೌಳಿ ಜಿಲ್ಲಾಡಳಿಕ್ಕೆ ಮಾಹಿತಿ ನೀಡದೆ ಪ್ರವೇಶ ಮಾಡಿದ್ದಾರೆ. ಮೇ 14ರಂದು ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆಯ ಕನಕವಳ್ಳಿಯಿಂದ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿಗೆ ಪ್ರವೇಶ ಮಾಡಿದ್ದಾರೆ.
ಮಹಾರಾಷ್ಟ್ರದಿಂದ ಬೆಳಗಾವಿಯ ನಿಪ್ಪಾಣಿಗೆ ಕೆಎಸ್‍ಆರ್ ಟಿಸಿ ಬಸ್ಸಿನಲ್ಲಿ ಬಂದಿಳಿದ ಇಬ್ಬರು ವ್ಯಕ್ಯಿಗಳು, ಅಲ್ಲಿಂದ ಕಾಲ್ನಡಿಗೆ ಮೂಲಕ ಅಂತರ್ ರಾಜ್ಯ ಚೆಕ್ ಪೋಸ್ಟ್ ದಾಟಿದ್ದಾರೆ. ಬಳಿಕ ಕಾರ್ ಮೂಲಕ ಚಿಕ್ಕನಾಯಕನಹಳ್ಳಿಯ ಹುಳಿಯಾರಿಗೆ ಬಂದಿದ್ದು, ಒಬ್ಬೊಬ್ಬರಾಗಿ ಸ್ಕೂಟಿಯಲ್ಲಿ ಮನೆ ತಲುಪಿದ್ದಾರೆ. ಅಂತರ್ ರಾಜ್ಯ ಪ್ರಯಾಣಿಕರಾಗಿದ್ದು, ರಾಜ್ಯದಲ್ಲಿ ನಿಯಮ ಪಾಲಿಸದೇ ಅಕ್ರಮವಾಗಿ ಪ್ರವೇಶಿಸಿದ್ದು, ಜಿಲ್ಲೆಯ ಗಡಿಗೆ ಬಂದಾಗ ಪಾಲಿಸಬೇಕಾದ ನಿಯಮಗಳ ಉಲ್ಲಂಘಿಸಿದ್ದಾರೆ. ಅಲ್ಲದೆ ಕೊರೊನಾ ಹಾಟ್‍ಸ್ಪಾಟ್ ಆಗಿರುವ ಮಹಾರಾಷ್ಟ್ರದಿಂದ ಆಗಮಿಸಿದ್ದಕ್ಕೆ ಜಿಲ್ಲೆಯ ಜನ ಭಯಭೀತರಾಗಿದ್ದಾರೆ.
ಈ ಮೂವರ ಮೇಲೆ ಸೆಕ್ಷನ್ 269, 271 ಹಾಗೂ 51 (ಬಿ)ಡಿಎಂ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಲಾಗಿದ್ದು, ಪ್ರಯಾಣಕ್ಕೆ ಬಳಸಿದ್ದ ಕಾರು ಹಾಗೂ ಸ್ಕೂಟಿ ಸೇರಿ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರು ಚಾಲಕ ಸೇರಿ 4 ಜನರನ್ನು ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಐಸೊಲೇಷನ್ ಮಾಡಲಾಗಿದೆ.