ತುಮಕೂರು: ಶತಾಯಗತಾಯ ತಬ್ಲಿಘಿಗಳನ್ನು ಕ್ವಾರಂಟೈನ್ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದು, ಗ್ರಾಮಸ್ಥರ ಮನವೊಲಿಸಿ 17 ತಬ್ಲಿಘಿಗಳನ್ನು ಕ್ವಾರಂಟೈನ್ ಮಾಡಿದ್ದಾರೆ.
ಅಹಮದಾಬಾದ್ ನಿಂದ ಬಂದು ಚಿತ್ರದುರ್ಗದಲ್ಲಿ ಪತ್ತೆಯಾಗಿದ್ದ ತುಮಕೂರಿನ 17 ಜನ ತಬ್ಲಿಘಿಗಳನ್ನು ಪಾವಗಡದ ವೈ.ಎನ್.ಹೊಸಕೋಟೆಯ ಕುರುಬರಹಳ್ಳಿ ಬಳಿಯ ಬಾಲಕಿಯರ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇದರಲ್ಲಿ ಪಾವಗಡದ ವೈ.ಎನ್.ಹೊಸಕೋಟೆಯ 13 ಜನರಿದ್ದು, ಉಳಿದ 5 ಜನ ಆಂಧ್ರ ಮೂಲದವರು ಎಂದು ಗುರುತಿಸಲಾಗಿದೆ.
ಕ್ವಾರಂಟೈನ್ ಮಾಡಲು ಅವಕಾಶ ಕೊಡದೆ ಸ್ಥಳೀಯರು ಆರಂಭದಲ್ಲಿ ತಗಾದೆ ತೆಗೆದಿದ್ದರು. ಇಡೀ ರಾತ್ರಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ತಹಶಿಲ್ದಾರ್ ವರದರಾಜು ಸೇರಿದಂತೆ ಅಧಿಕಾರಿಗಳಿಂದ ಗ್ರಾಮಸ್ಥರ ಮನವೊಲಿಕೆ ಪ್ರಕ್ರಿಯೆ ನಡೆದಿತ್ತು. ಅಧಿಕಾರಿಗಳು ಗ್ರಾಮಸ್ಥರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಸ್ಥಳೀಯರು ಬೆಳಗ್ಗೆ 5 ಗಂಟೆಗೆ ಕ್ವಾರಂಟೈನ್ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.
ಸಂಪೂರ್ಣ ಚೆಕಪ್ ಮಾಡಿ ಕ್ವಾರಂಟೈನ್ ಮಾಡಿ ನಂತರ ಅಧಿಕಾರಿಗಳು ಹಾಸ್ಟಲ್ ಸೀಲ್ ಡೌನ್ ಮಾಡಿದ್ದಾರೆ. ಪಾವಗಡ ಪಿಎಸ್‍ಐ ನಾಗರಾಜು, ವೈದ್ಯಾಧಿಕಾರಿ ತಿರುಪತಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.