ಗೋಕಾಕ: ದೇಶದ ಸಮಸ್ಯೆಯನ್ನು ನಿವಾರಿಸಲು ಯುವ ಶಕ್ತಿಯಿಂದ ಮಾತ್ರ ಸಾಧ್ಯ. ಆರೋಗ್ಯಯುತ ಭಾರತವಾಗಬೇಕು. ಭಾರತೀಯ ಸಂಸ್ಕøತಿಯನ್ನು ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.
ಅವರು ರವಿವಾರದಂದು ಇಲ್ಲಿಯ ಶುಭಂ ಗಾರ್ಡನ್‍ನಲ್ಲಿ ಜರುಗಿದ ನಗರದ ಜಿಎನ್‍ಎಸ್ ಶಾಲೆಯ 1998-99 ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರುಗಳಿಗೆ ಗೌರವ ನಮನ ಹಾಗೂ ಸ್ನೇಹಿತರ ಪುನರ್ ಮಿಲನ ಹಾಗೂ ಗುರುಸ್ಮøತಿ ಹಾಗೂ ಅಪೂರ್ವ ಸ್ನೇಹ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಂದೆತಾಯಿ, ಗುರುವಿನ, ಸಮಾಜದ ಋಣ ತೀರಿಸಲು ಸಮಾಜಮುಖಿ ಕಾರ್ಯ ಮಾಡಿದಾಗ ಮಾತ್ರ ಸಾಧ್ಯವಾಗುತ್ತದೆ. ಅರ್ಥಪೂರ್ಣ ಜೀವನ ನಡೆಸಲು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಈಗಾಗಲೇ ಹಳೆ ವಿದ್ಯಾರ್ಥಿಗಳ ಸಂಘವನ್ನು ಕಟ್ಟಿಕೊಂಡು ಸಂಘದಿಂದ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ, ರಕ್ತದಾನ ಶಿಬಿರ ಹಾಗೂ ಪ್ರವಾಹ ಮತ್ತು ಕೋರಾನಾ ಸಂಕಷ್ಟದ ಸಮಯದಲ್ಲಿ ಸಂತ್ರಸ್ತರ ನೆರವಿಗೆ ಬಂದಿದ್ದು ಶ್ಲಾಘನೀಯವಾಗಿದೆ ಎಂದರು.
ನಿವೃತ್ತ ಬಿಇಒ ಶ್ರೀಮತಿ ಕೆ.ಎ.ಸನದಿ ಹಾಗೂ ಧಾರವಾಡ ಬಿಇಒ ಎಸ್.ಸಿ.ಕರಿಕಟ್ಟಿ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆಯನ್ನು ಮಾಡುತ್ತಾ ಇಂದು ಎಲ್ಲರೂ ಒಟ್ಟಾಗಿ ಸೇರುವ ಜೊತೆಗೆ ಶಿಕ್ಷಕರನ್ನು ಸೇರಿಸಿ ಗೌರವ ನೀಡುವಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಹೆಮ್ಮೆಯ ವಿಷಯವಾಗಿದೆ. ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಸಮಾಜದ ಉದ್ಧಾರ, ಮುಂದಿನ ಗುರಿಗಳನ್ನು ಇಟ್ಟುಕೊಂಡು ಕೆಲಸ ಮಾಡಿರಿ, ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು.
ವಿದ್ಯಾದಾನ ಮಾಡಿದ ಶಿಕ್ಷಕರಾದ ಎಮ್.ಪಿ.ಗಾಣಗಿ, ಎಂ.ಎ.ಕೋತವಾಲ, ಎಂ.ಎಂ.ಹಾದಿಮನಿ, ಸಿ.ಎಸ್. ಮೇಗಲಮನಿ, ಎ.ಕೆ.ಜಮಾದಾರ, ಬಿ.ಎಸ್.ಸೊಲಬನ್ನವರ, ಎಚ್.ಡಿ.ಬೇಗ, ಎಂ.ಎ.ಬಾಗೇವಾಡಿ, ಡಿ.ವಿ.ಕಾಂಬಳೆ, ಎಂ.ಎಸ್.ವಕ್ಕುಂದ, ಡಿ.ಸಿ.ಜುಗಳಿ, ಎಸ್.ಪಿ.ಹಿರೇಮಠ, ಎಸ್.ಎಸ್.ಮುನವಳ್ಳಿ, ಎಸ್.ಎಂ.ಕಲಗುಡಿ, ಆರ್.ಕೆ.ಹಂದಿಗುಂದ, ಎಂ.ಆರ್.ಹರಿದಾಸ, ಯು.ಕೆ.ವಿಭೂತಿ, ಬಿ.ಡಿ.ಸೊಗಲಿ, ಶಿಕ್ಷೇತರ ಸಿಬ್ಬಂದಿಗಳಾದ ಎಂ.ಎಚ್.ಕಾಲೇಬಾಯಿ, ಎಸ್.ಜಿ.ಆಲತಗಿ, ಆರ್.ಎಲ್.ಬಬಲಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಅಗಲಿದ ಗುರುವೃಂದ ಹಾಗೂ ಮಿತ್ರರಿಗೆ ಶೃದ್ಧಾಂಜಲಿ ಸಲ್ಲಿಸಿ ಮೌನ ಆಚರಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮವನ್ನು ಎಸ್.ಕೆ.ಮಠದ ಸ್ವಾಗತಿಸಿದರು. ಶೈಲಾ ಕೊಕ್ಕರಿ ನಿರೂಪಿಸಿದರು. ಮಲ್ಲಪ್ಪ ದಾಸಪ್ಪಗೋಳ ವಂದಿಸಿದರು.