ಬೆಂಗಳೂರು : ಕೊರೊನಾ ಸೋಂಕು ಹೆಚ್ಚಾದ ಪರಿಣಾಮ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಾದ ಕಾರಣ ಮುಂದೂಡಲ್ಪಟ್ಟಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ನಡೆಸಲು ಎಲ್ಲ ಸಿದ್ದತೆಗಳನ್ನು ಪ್ರಾರಂಭಿಸಬೇಕೆಂದು ಅಧಿಕಾರಿಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚಿಸಿದ್ದಾರೆ.
ಸೋಮವಾರ ಎಲ್ಲ ಶಿಕ್ಷಣ ಉಪನಿರ್ದೇಶಕರ ಜತೆ ವಿಡಿಯೋ ಸಂವಾದ ನಡೆಸಿದ್ದು, ಈ ಸಂದರ್ಭ ಸೂಚನೆ ನೀಡಿದ್ದಾರೆ. ಲಾಕ್ ಡೌನ್ ಮುಗಿದ ತಕ್ಷಣವೇ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ನಡೆಸಲು ಈಗಿನಿಂದಲೇ ಸಿದ್ಧತೆಗಳನ್ನು ಕೈಗೊಳ್ಳಬೇಕು.
ಪರೀಕ್ಷೆಗಳನ್ನು ನಿರ್ವಹಿಸುವ ಬಗ್ಗೆ ಕೂಡಲೇ ಗಮನ ಹರಿಸಬೇಕೆಂದು ಸೂಚನೆ ನೀಡಿದರು.ಪರೀಕ್ಷಾ ವೇಳಾಪಟ್ಟಿ ಪ್ರಕಟಿಸುವ ಮೊದಲು ಪರೀಕ್ಷಾ ಸಿದ್ದತೆಗೆ ವಿಷಯವಾರು ಅಂತರ ಕಾಯ್ದುಕೊಳ್ಳುವಂತೆಯೂ ನಿದೇರ್ಶನ ನೀಡಿದರು.
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದ ನಂತರ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಬೇಕು. ಅವರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕು. ಥರ್ಮಲ್ ಸ್ಕೀನಿಂಗ್ ನಡೆಸಲು ಅಗತ್ಯ ಸಿದ್ಧತೆ ನಡಿಸಿಕೊಳ್ಳಿ. ಜ್ವರದ ಲಕ್ಷಣಗಳಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಗೆ ಕಳುಹಿಸಿ ಎಂದು ಸೂಚನೆ ನೀಡಿದ್ದಾರೆ.
ಕಂಟೈನ್‌ಮೆಂಟ್ ಝೋನ್‌ನಲ್ಲಿರುವ ಪರೀಕ್ಷಾ ಕೇಂದ್ರಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದಾರೆ. ಅಗತ್ಯ ಡೆಸ್ಕ್, ಬೆಂಚ್, ವ್ಯವಸ್ಥೆ ಮಾಡಿ. ಪರೀಕ್ಷಾ ಕೊಠಗಳಲ್ಲಿ ಸಿಸಿಟಿವಿ , ವೈದ್ಯಕೀಯ ಸೌಲಭ್ಯ ಕಡ್ಡಾಯವಾಗಿರಬೇಕು.
ನೆಲದ ಮೇಲೆ ಅಥವಾ ಬಯಲಿನಲ್ಲಿ ಪರೀಕ್ಷೆ ಬರೆಯದಂತೆ ಎಚ್ಚರಿಕೆ ವಹಿಸಬೇಕು. ಒಂದು ಕೊಠಡಿಯಲ್ಲಿ 24 ಮಕ್ಕಳ ಬದಲಿಗೆ ಕಡಿಮೆ ಮಕ್ಕಳನ್ನು ಕೂರಿಸಲು ಸಲಹೆ ನೀಡಿದ್ದಾರೆ.
ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದ ಜಿಲ್ಲೆಗಳನ್ನು ಕೆಂಪು, ಕಿತ್ತಳೆ, ಹಸಿರು ಮತ್ತು ಕಂಟೇನ್ ಮೆಂಟ್ ವಲಯಗಳೆಂದು ಗುರುತಿಸಿರುವ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಕೈಗೊಳ್ಳಬೇಕಿರುವ ಪರೀಕ್ಷಾ ಸಿದ್ಧತೆ ಕುರಿತು ಸಚಿವರು ಜಿಲ್ಲಾ ಅಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸಿದರು.
ಈಗಾಗಲೇ ಚಂದನ ವಾಹಿನಿಯಲ್ಲಿ ಪುನರ್ಮನನ ತರಗತಿಗಳು ನಡೆಯುತ್ತಿವೆ. ಈ ವಾರದಿಂದ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೂ ರಿವಿಷನ್ ಕ್ಲಾಸ್ ಆರಂಭಿಸಲು ಅಧಿಕಾರಿಗಳಿಗಳಿಗೆ ನಿರ್ದೇಶನ ನೀಡಿದರು.
ಇಲಾಖೆಯ ಮಕ್ಕಳವಾಣಿ ಯೂ-ಟ್ಯೂಬ್ ಚಾನೆಲ್ ನಲ್ಲಿಯೂ ಸಹ ಪುನರ್ಮನನ ತರಗತಿಗಳು ವಿದ್ಯಾರ್ಥಿಗಳಿಗೆ ಲಭ್ಯವಿದ್ದು, ಎಸ್ಎಸ್ ಎಲ್ ಸಿ ಪರೀಕ್ಷೆ ಕುರಿತು ಮಕ್ಕಳಲ್ಲಿ ಅನುಮಾನಗಳಿದ್ದರೆ ಪರೀಕ್ಷೆ ಇಷ್ಟರಲ್ಲೇ ನಡೆಯಲಿದೆ ಎಂಬ ಕುರಿತು ಮಕ್ಕಳಿಗೆ ಮತ್ತು ಪೋಷಕರಿಗೆ ಮನವರಿಕೆ ಮಾಡಬೇಕೆಂದು ಸಚಿವರು ಡಿಡಿಪಿ ಐಗಳಿಗೆ ಸೂಚಿಸಿದರು. ವಿಡಿಯೋ ಸಂವಾದ ಸಂದರ್ಭದಲ್ಲಿ ಇಲಾಖೆಯ ಆಯುಕ್ತ ಡಾ. ಕೆ.ಜಿ. ಜಗದೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.