ಸಾಮಾಜಿಕ ಅಂತರಕ್ಕೆ ಗೋಲಿ ಮಾರೋ
ಉಡುಪಿ: ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿದ್ದೇ ಕೊಟ್ಟಿದ್ದು ಎಣ್ಣೆಗೆ ಮಣಿಪಾಲದ ಮಾನಿನಿಯರು ಮುಗಿಬಿದ್ದ ಪ್ರಸಂಗ ಇಂದು ನಡೆದಿದೆ. ಸಾಮಾಜಿಕ ಅಂತರಕ್ಕೆ ಗೋಲಿ ಮಾರೋ ಅಂತ ಎದ್ದು ಬಿದ್ದು ಮದ್ಯ ಖರೀದಿ ಮಾಡಿದರು.
ರೂಲ್ಸ್ & ರೆಗ್ಯುಲೇಶನ್ ಅನ್ನು ಉಡುಪಿಯ ಮಣಿಪಾಲದಲ್ಲಿ ಗಾಳಿಗೆ ತೂರಿ, ಬಿಸಿಲ ದಾಹ ತೀರಿಸಲು ಬಿಯರ್ ಗಾಗಿ ಬಿಸಿಲಿನಲ್ಲೇ ಯುವತಿಯರು ಒಣಗಿದರು. ಮಣಿಪಾಲದಲ್ಲಿ ಮದ್ಯಕ್ಕಾಗಿ ಯುವತಿಯರು ಸರತಿ ಸಾಲು ಕಟ್ಟಿದ್ದರು. ಬಿಸಿಲ ಝಳದಲ್ಲಿ ಛತ್ರಿ ಹಿಡಿದುಕೊಂಡು ಸಾಲಲ್ಲಿ ನಿಂತು ಎಣ್ಣೆ ಪಡೆದುಕೊಂಡರು.
ಯುವತಿಯರು ಒಂದೂವರೆ ತಿಂಗಳ ಬಳಿಕ ಎಣ್ಣೆಯನ್ನು ಕಂಡು ಫುಲ್ ಖುಷ್ ಆಗಿದ್ದರು. ಹೊರರಾಜ್ಯದ ಯುವತಿಯರು ಹಾಗೂ ವಿದೇಶಿ ಮಹಿಳೆ ಕೂಡ ಲೈನ್‍ನಲ್ಲಿ ಬಂದು ಮಾದಕ ಪೇಯ ಖರೀದಿ ಮಾಡಿದರು. ಮಣಿಪಾಲದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರು ಲಾಕ್‍ಡೌನ್ ಮೊದಲು ಮಣಿಪಾಲದಲ್ಲಿ ನೈಟ್ ಲೈಫ್ ಎಂಜಾಯ್ ಮಾಡುತ್ತಿದ್ದರು. ಆದರೆ ಲಾಕ್‍ಡೌನ್ ನಂತರ ಹಾಸ್ಟೆಲ್ ಮತ್ತು ಪಿಜಿಯಲ್ಲಿ ಬಂಧನದಲ್ಲಿದ್ದರು.
ಇದೀಗ ಸ್ವಾತಂತ್ರ್ಯ ಸಿಕ್ಕವರಂತೆ ಮುಗಿಬಿದ್ದು ಮದ್ಯ ಖರೀದಿ ಮಾಡಿದ್ದಾರೆ. ಊರಿಗೆ ಹೋಗಲಾಗದೆ ಇಲ್ಲೇ ಸಿಕ್ಕಿಬಿದ್ದಿರುವ ಹೊರ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು, ಪ್ರತಿದಿನ ಪಾನ-ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ನಂತರ ಇಷ್ಟು ದಿನ ವಿದ್ಯಾರ್ಥಿಗಳಿಗೆ ಎಣ್ಣೆ ಸಿಗದೆ ಸಾಕಷ್ಟು ಸಮಸ್ಯೆಯಾಗಿತ್ತು. ಈಗ ಮದ್ಯದಂಗಡಿಗಳು ಓಪನ್ ಆದ ಕಾರಣ ಬೆಳ್ಳಂಬೆಳಗ್ಗೆ ಸಾರ್ವಜನಿಕವಾಗಿ ಸಾಲಿನಲ್ಲಿ ನಿಂತು ವಿದ್ಯಾರ್ಥಿಗಳು ಮದ್ಯ ಖರೀದಿ ಮಾಡುವಷ್ಟರಲ್ಲಿ ಮಧ್ಯಾಹ್ನ ಆಗಿತ್ತು. ಸಾಲಿನಲ್ಲಿ ಕಂಡುಬಂದ ಓರ್ವ ವಿದೇಶಿ ಮಹಿಳೆ ಕೂಡ ತನ್ನ ಇಷ್ಟದ ಮದ್ಯ ಖರೀದಿಸಿ ಸರ್ಕಾರವನ್ನು ಬೆಂಬಲಿಸಿದ್ದಾರೆ. ಮಣಿಪಾಲದ ಕೆಲ ಮದ್ಯದಂಗಡಿಗಳಲ್ಲಿ ಸಾಮಾಜಿಕ ಅಂತರವೇ ಇಲ್ಲದಿರುವುದು ಕಂಡು ಬಂತು.