ಕೋಲಾರ: ಕೋವಿಡ್-19 ಆಸ್ಪತ್ರೆಗೆ ನುಗ್ಗಿದ ವ್ಯಕ್ತಿ ಕೊರೊನಾ ಸೋಂಕಿತ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಭಾನುವಾರ ಘಟನೆ ನಡೆದಿದ್ದು, ಈ ಸಂಬಂಧ ಆಸ್ಪತ್ರೆಯ ರಕ್ಷಣಾಧಿಕಾರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಶ್ವನಾಥಾಚಾರಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ. ಈತ ನಗರದ ಬೆಸ್ತರ ಬೀದಿಯ ಗೆಲ್ಪೇಟ್ ನಿವಾಸಿ ಎಂದು ತಿಳಿದು ಬಂದಿದೆ. ಶ್ರೀನಿವಾಸಪುರ ತಾಲೂಕಿನ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಅರೋಗ್ಯ ಸಹಾಯಕನಾಗಿದ್ದಾನೆ ಎಂದು ತಿಳಿದು ಬಂದಿದೆ.
ರಾತ್ರಿ ನಡೆದಿದ್ದೇನು?
ಜೂನ್ 21ರ ರಾತ್ರಿ ಸುಮಾರು 1.30ಕ್ಕೆ ಆಸ್ಪತ್ರೆಗೆ ಬಂದ ವಿಶ್ವನಾಥಾಚಾರಿ ನಿಷೇಧಿತ ಪ್ರದೇಶದೊಳಗೆ ಬಂದಿದ್ದಾನೆ. ಕೊಠಡಿಯ ಲೈಟ್ ಗಳು ಆಫ್ ಮಾಡಿ ಕೊರೊನಾ ಸೋಂಕಿತೆಯ ಕೈ ಹಿಡಿದು ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದಾನೆ. ಸೋಂಕಿತೆ ಕೂಗಿಕೊಳ್ಳುತ್ತಿದ್ದಂತೆ ಆಸ್ಪತ್ರೆಯ ಸಿಬ್ಬಂದಿ ತೆರಳಿದ್ದಾರೆ. ವಿಶ್ವನಾಥಾಚಾರಿ ಆಸ್ಪತ್ರೆಯ ಸಿಬ್ಬಂದಿಯನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವೈದ್ಯ ಬೈಯಪ್ಪ ರೆಡ್ಡಿಯವರನ್ನು ವಿಶ್ವನಾಥಾಚಾರಿ ನಿಂದಿಸಿದ್ದಾನೆ.
ಈ ಸಂಬಂಧ ಆಸ್ಪತ್ರೆ ಸಿಬ್ಬಂದಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶ್ವನಾಥಾಚಾರಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.