Breaking News

ಸದ್ಯಕ್ಕೆ ಶಾಲೆ ಆರಂಭಿಸುವುದಿಲ್ಲ, ಯಾರೂ ಆತಂಕ ಪಡುವ ಅಗತ್ಯವಿಲ್ಲ : ಸುರೇಶ್ ಕುಮಾರ್

Spread the love

ಬೆಂಗಳೂರು: ಸದ್ಯಕ್ಕೆ ನಾವು ಶಾಲೆ ಆರಂಭಿಸುವುದಿಲ್ಲ. ಪೋಷಕರು ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಫೇಸ್‍ಬುಕ್‍ನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೇ 30 ರಂದು ಶಾಲೆಗಳನ್ನು ಆರಂಭಿಸುವ ಬಗ್ಗೆ ಪೋಷಕರ ಅಭಿಪ್ರಾಯವನ್ನು ಕೇಳಿ ಎಂದು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು. ಈ ನಿಟ್ಟಿನಲ್ಲಿ ನಾವು ರಾಜ್ಯದಲ್ಲಿರುವ ಶಾಲೆಗಳಿಗೆ ಸುತ್ತೋಲೆ ಕಳುಹಿಸಿ ಪೋಷಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು

ಇದೇ ಜೂನ್ 10, 11, 12 ರಂದು ಎಲ್ಲ ಶಾಲೆಗಳಲ್ಲಿ ಪೋಷಕರ ಸಭೆ ನಡೆಯಲಿದೆ. ಪೋಷಕರ ಅಭಿಪ್ರಾಯಗಳು ಕ್ರೋಢಿಕರಣವಾಗಿ ಜೂನ್ 15ಕ್ಕೆ ಸರ್ಕಾರವನ್ನು ತಲುಪಬಹುದು. ನಂತರ ಶಾಲೆ ಆರಂಭಿಸಬೇಕೋ? ಬೇಡವೋ ಎಂಬುದನ್ನು ನಿರ್ಧಾರ ಮಾಡಲಾಗುವುದು. ಜುಲೈ ಒಂದರಿಂದ ಶಾಲೆಯನ್ನು ತೆರೆಯುವುದಿಲ್ಲ. ಅಭಿಪ್ರಾಯ ಸಂಗ್ರಹವಷ್ಟೇ ಎಂದು ಸ್ಪಷ್ಟ ಪಡಿಸಿದರು.

ಈ ಸಂದರ್ಭದಲ್ಲಿ ಎರಡು ಅಭಿಪ್ರಾಯಗಳು ವ್ಯಕ್ತವಾಗಿದೆ. ಕೊರೊನಾ ದೀರ್ಘ ಕಾಲ ಇದ್ದರೆ ಅಲ್ಲಿಯವರೆಗೆ ಶಾಲೆಯನ್ನು ಮುಂದೂಡಬೇಕೇ ಅಥವಾ ಕೊರೊನಾದ ಜೊತೆಗೆ ನಾವು ಬದುಕಬೇಕೇ ಎಂಬ ಪ್ರಶ್ನೆ ಎದ್ದಿದೆ. ಈಗಾಗಲೇ ಚಿಕನ್ ಗುನ್ಯಾ ರೀತಿಯ ಕಾಯಿಲೆ ಜೊತೆ ಬದುಕುತ್ತಿದ್ದೇವೆ. ಇದೇ ರೀತಿಯಾಗಿ ಕೊರೊನಾ ಜೊತೆ ಬದುಕಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಯೂ ಎದ್ದಿದೆ. ಇದರ ಜೊತೆಯಲ್ಲಿ ಶಾಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವುದು ಹೇಗೆ ಎಂಬ ಬಗ್ಗೆ ನಾವು ಚರ್ಚಿಸಬೇಕಿದೆ ಎಂದರು.

ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ಲಾಬಿಗೆ ಮಣಿದಿದೆ ಎಂದು ವರದಿಯಾಗುತ್ತಿದೆ. ನಾವು ಯಾವ ಲಾಬಿಗೂ ಮಣಿದಿಲ್ಲ. ತರಾತುರಿಯಲ್ಲಿ ನಾವು ಶಾಲೆಯನ್ನು ತೆರೆಯುವುದಿಲ್ಲ. ಮಕ್ಕಳ ಸುರಕ್ಷತೆ ಜೊತೆಗೆ ಮಕ್ಕಳ ಕಲಿಕೆ, ಭವಿಷ್ಯವನ್ನು ಗಮನದಲ್ಲಿಟ್ಟು ನಿರ್ಧಾರವನ್ನು ಕೈಗೊಳ್ಳುತ್ತೇವೆ. ಸದ್ಯಕ್ಕೆ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆ ಪ್ರಾರಂಭ ಬೇಡ ಎಂಬ ಅಭಿಪ್ರಾಯ ಬಂದಿದೆ. ಪೋಷಕರ ಅಭಿಪ್ರಾಯ ಪಡೆದ ಬಳಿಕ ನಾವು ಶಾಲೆ ಆರಂಭಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.


Spread the love

About Laxminews 24x7

Check Also

ಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್

Spread the loveಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್ ಬೆಂಗಳೂರು, ನವೆಂಬರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ