ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಹುಂಡಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ ದಾಖಲೆ ಮೊತ್ತದ ಹಣ, ಚಿನ್ನ ಹಾಗೂ ಬೆಳ್ಳಿ ಕಾಣಿಕೆ ಸಂಗ್ರಹವಾಗಿದೆ. ಒಂದೇ ತಿಂಗಳಲ್ಲಿ 1.20 ಕೋಟಿ ರೂ. ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.
ಮಹಾಮಾರಿ ಕೋವಿಡ್ ಸೋಂಕಿನ ಕಾರಣದಿಂದ 1 ವರ್ಷ 8 ತಿಂಗಳು ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದೇವಸ್ಥಾನ ಬಂದ್ ಆಗಿತ್ತು. ಸೆಪ್ಟೆಂಬರ್ 28ರಂದು ಭಕ್ತರ ಪ್ರವೇಶಕ್ಕೆ ದೇವಸ್ಥಾನ ಮುಕ್ತಗೊಳಿಸಿ ಬೆಳಗಾವಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಮಹಾರಾಷ್ಟ್ರದ, ಗೋವಾ ರಾಜ್ಯದಿಂದ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದುಕೊಳ್ಳುತ್ತಿದ್ದರು.
ಅದೇ ರೀತಿ ಅಕ್ಟೋಬರ್ ತಿಂಗಳ ಹುಂಡಿಯನ್ನು ಶುಕ್ರವಾರ ಸವದತ್ತಿ ತಾಲೂಕು ಆಡಳಿತದಿಂದ ಏಣಿಸಲಾಯಿತು. ಒಂದೇ ತಿಂಗಳಲ್ಲಿ 1.20 ಕೋಟಿ ರೂ. ಮೌಲ್ಯದ ಹಣ, ಚಿನ್ನ ಹಾಗೂ ಬೆಳ್ಳಿ ಸಂಗ್ರಹವಾಗಿದೆ. 15 ಲಕ್ಷ ರೂ. ಮೌಲ್ಯದ ಚಿನ್ನ, 2 ಲಕ್ಷ ಮೌಲ್ಯದ ಬೆಳ್ಳಿಯ ಆಭರಣಗಳು ಕಾಣಿಕೆಯಾಗಿ ಬಂದಿವೆ. 85 ದೇವಾಲಯ ಸಿಬ್ಬಂದಿ ಹಾಗೂ ಬ್ಯಾಂಕ್ ಸಿಬ್ಬಂದಿಯಿಂದ ಹುಂಡಿ ಏಣಿಕೆ ಕಾರ್ಯ ನಡೆಯಿತು. ವರ್ಷಕ್ಕೆ 4 ಕೋಟಿ ರೂಪಾಯಿ ಸರಾಸರಿ ಆದಾಯವನ್ನು ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನ ಹೊಂದಿದೆ.